ಕನಸಿನಲ್ಲಿ ಈ ವಸ್ತು ಕಂಡರೆ ಅದೃಷ್ಟ ಖುಲಾಯಿಸಿದಂತೆ .!

ಕನಸಿನ ಶಾಸ್ತ್ರದಲ್ಲಿ ಕನಸುಗಳ ಅರ್ಥವನ್ನು ಹೇಳಲಾಗಿದೆ.  ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ರಾತ್ರಿ ಹೊತ್ತು ಬೀಳುವ ಕನಸುಗಳನ್ನು ಬೆಳಿಗ್ಗೆ ಮರೆತುಬಿಡುತ್ತಾನೆ. ಅಥವಾ ಕನಸಿಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ. ಆದರೆ ಕೆಲವೊಂದು ಬಾರಿ ಕೆಲವು ಕನಸುಗಳು ದಿನವಿಡೀ ವ್ಯಕ್ತಿಯನ್ನು ಕಾಡುತ್ತಲೇ ಇರುತ್ತದೆ. ಎಷ್ಟೋ ಬಾರಿ ಕನಸುಗಳ ಅರ್ಥ ಗೊತ್ತಿಲ್ಲದ ಕಾರಣ, ವ್ಯಕ್ತಿಯು ಕನಸುಗಳನ್ನು ನಿರ್ಲಕ್ಷಿಸಿ ಬಿಡುತ್ತಾನೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ವ್ಯಕ್ತಿಯ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ  ಬಗ್ಗೆಯೂ ಸೂಚನೆ ನೀಡುತ್ತದೆ. 

ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು  ಹೇಳಲಾಗುತ್ತದೆ. ಆದರೆ ಕನಸಿನಲ್ಲಿ ಮಾತ್ರ ಪೊರಕೆಯನ್ನು ನೋಡುವುದು ಶುಭವಲ್ಲ. ಪೊರಕೆಗೆ ಸಂಬಂಧಿಸಿದ ಕೆಲವು ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ಇಲ್ಲಿ ತಿಳಿಯೋಣ. 

ಕನಸಿನಲ್ಲಿ  ಪೊರಕೆ ಕಂಡರೆ ಏನರ್ಥ : ನೆಲದ ಮೇಲೆ ಮಲಗಿರುವ ಸ್ಥಿತಿಯಲ್ಲಿರುವ ಪೊರಕೆ ಕಂಡರೆ, ಇದು ಅಶುಭ ಸಂಕೇತ ಎಂದು ಹೇಳಲಾಗಿದೆ.  ಸ್ವಪ್ನ ಶಾಸ್ತ್ರದ ಪ್ರಕಾರ, ಅಂತಹ ಕನಸು ಬಂದರೆ, ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದರ್ಥ. ಪೊರಕೆಯನ್ನು  ಮಹಾ ಲಕ್ಷ್ಮಿಯ ರೂಪವೆಂದು  ಹೇಳಲಾಗುತ್ತದೆ. ಪೊರಕೆ ನೆಲದ ಮೇಲೆ ಬಿದ್ದಿರುವುದನ್ನು ನೋಡಿದರೆ  ಲಕ್ಷ್ಮೀ ದೇವಿಗೆ  ಅವಮಾನವಾಗುತ್ತಿದೆ ಎಂದರ್ಥ. 

ಕನಸಿನಲ್ಲಿ ಬಾಗಿಲಿನ ಹಿಂದೆ ಇಟ್ಟಿರುವ ಪೊರಕೆಯನ್ನು ಕಂಡರೂ ಅಶುಭವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಮಾಡಲು ಹೊರಟಿರುವ ಕೆಲವೊಂದು ಕೆಲಸಗಳು ಕೆಡಬಹುದು ಎನ್ನುವುದನ್ನು ಸೂಚಿಸುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸುತ್ತಿದ್ದರೆ, ಆ ಕೆಲಸವನ್ನು ಅಲ್ಲಿಯೇ ಬಿಟ್ಟು ಬಿಡುವುದು ಒಳ್ಳೆಯದು.  

ಆದರೆ ಕನಸಿನಲ್ಲಿ ಯಾರಾದರೂ ಗುಡಿಸುತ್ತಿರುವುದನ್ನು ಕಂಡರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಶೀಘ್ರದಲ್ಲೇ ಶ್ರೀಮಂತರಾಗಬಹುದು ಎನ್ನುವುದ ಮುನ್ಸೂಚನೆಯನ್ನು ಈ ಕನಸು ನೀಡುತ್ತದೆ.  ಮಾತ್ರವಲ್ಲ ನಿಮ್ಮ ಎಲ್ಲಾ ಆಸೆಗಳು ಶೀಘ್ರವೇ ನೆರವೇರುವುದು. ಇನ್ನು ಕನಸಿನಲ್ಲಿ ಪೊರಕೆ ಖರೀದಿಸುವುದನ್ನು ಕಂಡರೂ ಅದು ಶುಭ.  ಈ ಕನಸು ನೀವು ಮಾಡಲು ಹೊರಟಿರುವ ಕೆಲಸದಲ್ಲಿ ಶೀಘ್ರದಲ್ಲೇ ಯಶಸ್ವಿಯಾಗಲಿದ್ದೀರಿ ಎನ್ನುವುದನ್ನು  ಸೂಚಿಸುತ್ತದೆ. 

Leave a Comment