Kannada Health Tips :ಆಲೂಗಡ್ಡೆಯಲ್ಲಿ ಸೌಂದರ್ಯದ ಗುಣಗಳು ಏನು ಗೊತ್ತಾ?

Kannada Health Tips :ಇದು ಕೇವಲ ಹೊಟ್ಟೆಯ ಹಸಿವು ನೀಗಿಸಲು ಮಾತ್ರವಲ್ಲ, ಚರ್ಮ ಮತ್ತು ಕೂದಲ ಸೌಂದರ್ಯ ಹೆಚ್ಚಿಸಲೂ ನೆರವಾಗುತ್ತದೆ. ಇದೇ ಕಾರಣಕ್ಕೆ ಚರ್ಮದ ಮತ್ತು ಕೂದಲ ಪೋಷಣೆಗಾಗಿ ಮತ್ತು ನೈಸರ್ಗಿಕ ಸೌಂದರ್ಯ ಪಡೆಯಲು ಆಲೂಗಡ್ಡೆಯನ್ನು ಅಲಕ್ಷಿಸುವಂತೆಯೇ ಇಲ್ಲ. ಅದೆಲ್ಲಾ ಸರಿ, ಆಲೂಗಡ್ಡೆಯ ಇಷ್ಟೆಲ್ಲಾ ಗುಣಗಳನ್ನು ಪಡೆದುಕೊಳ್ಳುವುದಾದರೂ ಹೇಗೆ? ಬನ್ನಿ, ಆಲೂಗಡ್ಡೆಯನ್ನು ಬಳಸಿ ಸೌಂದರ್ಯವನ್ನು ಹೇಗೆ ಅದ್ಭುತವಾಗಿ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನೋಡೋಣ…Do you know the beauty qualities of potatoes?

ಕಣ್ಣುಗಳ ಕಪ್ಪು ವರ್ತುಲವನ್ನು ನಿವಾರಿಸಲು-ಕಣ್ಣುಗಳ ಸುತ್ತಲ ಭಾಗದ ಚರ್ಮದ ಪದರಗಳು ತೀರಾ ತೆಳುವಾಗಿರುವ ಕಾರಣ ಈ ಭಾಗ ಶೀಘ್ರವಾಗಿ ಕಪ್ಪಗಾಗುತ್ತದೆ. ಇದನ್ನು ನಿವಾರಿಸಲು ಸಮರ್ಥವಾಗಿರುವ ಕೆಲವೇ ಪ್ರಸಾಧನಗಳಲ್ಲಿ ಆಲೂಗಡ್ಡೆಯೂ ಒಂದಾಗಿದೆ. ಆಲೂಗಡ್ಡೆಯ ರಸ ನೈಸರ್ಗಿಕ ಬಿಳಿಚುಕಾರಕವಾಗಿದೆ. ಇದು ಕಣ್ಣುಗಳ ಕೆಳಗಿನ ಕಪ್ಪಾಗಿದ್ದ ಭಾಗವನ್ನು ಸಹಜವರ್ಣಕ್ಕೆ ತಿರುಗಿಸುವುದು ಮಾತ್ರವಲ್ಲ, ಚರ್ಮದ ಆರೋಗ್ಯ ಕಾಪಾಡಲೂ ನೆರವಾಗುತ್ತದೆ. ಇದಕ್ಕಾಗಿ ಒಂದು ತಾಜಾ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಮಧ್ಯದಲ್ಲಿ ಕತ್ತರಿಸಿ ಮಧ್ಯದಿಂದ ಪ್ರಾರಂಭವಾಗುವಂತೆ ಕೆಲವು ಕೊಂಚವೇ ದಪ್ಪನಾದ ಬಿಲ್ಲೆಗಳನ್ನು ಕತ್ತರಿಸಿ. ಈ ಬಿಲ್ಲೆಗಳನ್ನು ಸುಮಾರು ಒಂದು ಗಂಟೆಯ ಕಾಲ ಫ್ರಿಜ್ಜಿನ ಅತಿಶೀತಲ ನೀರಿನಲ್ಲಿಡಿ. ಬಳಿಕ ಈ ತುಂಡುಗಳನ್ನು ಹೊರತೆಗೆದು ಕಣ್ಣುಗಳ ಕಪ್ಪಾದ ಭಾಗಕ್ಕೆ ತಗಲುವಂತೆ ಇರಿಸಿ ಆರಾಮವಾಗಿ ಪವಡಿಸಿ. ಸುಮಾರು ಮೂವತ್ತು ನಿಮಿಷಗಳ ಬಳಿಕ ನಿವಾರಿಸಿ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಿಸಿಲಿನಿಂದ ಕಪ್ಪಾಗಿರುವ ಭಾಗಕ್ಕೆ-ಬಿಸಿಲಿನ ಝಳಕ್ಕೆ ನೇರವಾಗಿ ಒಡ್ಡಿರುವ ಚರ್ಮದ ಬಣ್ಣವನ್ನು ಮತ್ತೆ ಸಹಜವರ್ಣಕ್ಕೆ ಪರಿವರ್ತಿಸಲು ಆಲೂಗಡ್ಡೆಯಲ್ಲಿರುವ ಅದ್ಭುತ ಸಾಮಾಗ್ರಿಗಳು ನೆರವಾಗುತ್ತವೆ. ಒಂದು ಆಲುಗಡ್ಡೆಯನ್ನು ಕೊಂಚ ಕಾಲ ಫ್ರೀಜರಿನಲ್ಲಿರಿಸಿ ಬಳಿಕ ತಣ್ಣಗಿದ್ದಂತೆಯೇ ಇದನ್ನು ತುರಿದು ತುರಿದ ಭಾಗವನ್ನು ಬಿಸಿಲಿನ ಝಳಕ್ಕೆ ನಲುಗಿದ ಚರ್ಮದ ಮೇಲೆ ತೆಳುವಾಗಿ ಹರಡಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಇದನ್ನು ನಿವಾರಿಸಿ ಐಸ್ ನೀರಿನಿಂದ ತೊಳೆದುಕೊಳ್ಳಿ. ಇದು ಸಾಧ್ಯವಾಗದಿದ್ದರೆ ಇನ್ನೊಂದು ವಿಧಾನವೂ ಇದೆ. ಕೊಂಚ ಹಸಿ ಆಲೂಗಡ್ಡೆಯನ್ನು ತುರಿದು ಮಿಕ್ಸಿಯಲ್ಲಿ ಕಡೆದು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ಬಿಸಿಲಿನ ಝಳಕ್ಕೆ ಸಿಲುಕಿದ ಚರ್ಮದ ಭಾಗಕ್ಕೆ ಹತ್ತಿಯುಂಡೆಯನ್ನು ಬಳಸಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಒಣಚರ್ಮದ ಆರೈಕೆಗಾಗಿ–ಒಂದು ವೇಳೆ ನಿಮ್ಮ ಚರ್ಮ ಒಣಚರ್ಮವಾಗಿದ್ದು ಪೇಲವವಾಗಿದ್ದರೆ ಆಲೂಗಡ್ಡೆಯನ್ನು ನಿಮ್ಮ ನಿತ್ಯದ ಸೌಂದರ್ಯ ಪ್ರಸಾಧನವಾಗಿಸುವುದು ಅನಿವಾರ್ಯವಾಗಿದೆ. ಒಣಚರ್ಮಕ್ಕೆ ಆರ್ದ್ರತೆಯ ಕೊರತೆ ಪ್ರಮುಖ ಕಾರಣವಾಗಿದ್ದು ಆಲೂಗಡ್ಡೆಯ ರಸದಲ್ಲಿರುವ ತೇವಕಾರಕ ಗುಣ ಚರ್ಮಕ್ಕೆ ಅಗತ್ಯವಾದ ಆರೈಕೆ ನೀಡುತ್ತದೆ. ಇದಕ್ಕಾಗಿ ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು ಇದಕ್ಕೆ ಕೊಂಚ ಲೋಳೆಸರದ ರಸವನ್ನು ಬೆರೆಸಿ ಮಿಶ್ರಣ ಮಾಡಿ. ಇದನ್ನು ನುಣ್ಣಗೆ ಅರೆದು ಮುಖಲೇಪದಂತೆ ಹಚ್ಚಿಕೊಂಡು ನಲವತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ಬಣ್ಣ ತಿಳಿಗೊಳಿಸಲು–ಆಲೂಗಡ್ಡೆಯ ರಸ ಒಂದು ನೈಸರ್ಗಿಕ ಬಿಳಿಚುಕಾರಕವಾಗಿದೆ. ಈ ಗುಣವನ್ನು ಚರ್ಮದ ಬಣ್ಣವನ್ನು ತಿಳಿಗೊಳಿಸಲು ಬಳಸಿಕೊಳ್ಳಬಹುದು. ಒಂದು ತಾಜಾ ಆಲೂಗಡ್ಡೆಯನ್ನು ತೊಳೆದು ಚಿಕ್ಕದಾಗಿ ತುರಿಯಿರಿ. ಇದಕ್ಕೆ ಒಂದು ಚಿಕ್ಕ ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿ ನುಣ್ಣಗೆ ಅರೆಯಿರಿ. ಈ ಲೇಪವನ್ನು ಕಪ್ಪಗಾಗಿದ್ದ ಚರ್ಮದ ಭಾಗಕ್ಕೆ ತೆಳುವಾಗಿ ಹೆಚ್ಚಿ ನಯವಾಗಿ ಮಸಾಜ್ ಮಾಡಿ. ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕಣ್ಣುಗಳ ಕೆಳಗೆ ತುಂಬಿಕೊಂಡಿರುವ ಚೀಲ ನಿವಾರಿಸಲು–ನಡುವಯಸ್ಸು ದಾಟಿದ ಬಳಿಕ ಕೆಲವರಲ್ಲಿ ಕಣ್ಣುಗಳ ಕೆಳಗೆ ಕೊಂಚ ಊದಿಕೊಂಡಂತಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಇವು ಸಹಜವರ್ಣಕ್ಕಿಂತಲೂ ಗಾಢವಾಗಿರುತ್ತವೆ. ಈ ಊದಿಕೊಂಡು ಚೀಲದಂತಾಗಿರುವ ಭಾಗವನ್ನು ನಿವಾರಿಸಲು ಆಲುಗಡ್ಡೆ ಸಮರ್ಥವಾಗಿದೆ. ಆಲೂಗಡ್ಡೆಯನ್ನು ತುರಿದು ಅರೆದು ತಯಾರಿಸಿದ ಐದು ಚಮಚ ಲೇಪಕ್ಕೆ ಮೂರು ಚಮಚದಷ್ಟು ಸೌತೇಕಾಯಿಯ ತುರಿದು ಅರೆದ ಲೇಪವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಣ್ಣುಗಳ ಕೆಳಗಿನ ಚೀಲಕ್ಕೆ ದಪ್ಪನಾಗಿ ಹಚ್ಚಿಕೊಳ್ಳಿ. ಸುಮಾರು ಮೂವತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ಉರಿ ಶಮನಗೊಳಿಸಲು–ಒಂದು ವೇಳೆ ಯಾವುದಾದರೂ ಕಾರಣಕ್ಕೆ ಚರ್ಮದಲ್ಲಿ ಉರಿ ಮತ್ತು ತುರಿಕೆ ಕಾಣಿಸಿಕೊಂಡರೆ ಉಗುರು ಸರ್ವಥಾ ತಾಕಿಸದಿರಿ. ಉಗುರು ತಾಗಿಸಿ ತುರಿಸಿದಷ್ಟೂ ಇದು ಹೆಚ್ಚುತ್ತಾ ಹೋಗುತ್ತದೆ. ಬದಲಿಗೆ ಒಂದು ಆಲೂಗಡ್ಡೆಯನ್ನು ತುರಿದು ಹಿಂಡಿ ರಸವನ್ನು ಸಂಗ್ರಹಿಸಿ. ಇದಕ್ಕೆ ಒಂದು ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ ಮಿಶ್ರಣ ಮಾಡಿ. ಈ ದ್ರವವನ್ನು ತುರಿಸುತ್ತಿರುವ ಭಾಗದ ಮೇಲೆ ತೆಳುವಾಗಿ ಹಚ್ಚಿ ಒಣಗಲು ಬಿಡಿ. ಸುಮಾರು ಮೂವತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಯಾವುದೋ ಅಲರ್ಜಿಯ ಕಾರಣದಿಂದ ಎದುರಾದ ತುರಿಕೆ, ಚರ್ಮ ಕೆಂಪಗಾಗುವುದು, ಬಿಸಿಲಿನ ಝಳದಿಂದ ಎದುರಾದ ತುರಿಕೆಯನ್ನೂ ಸುಲಭವಾಗಿ ನಿವಾರಿಸಬಹುದು.Kannada Health Tips

Leave a Comment