ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಈಗಾಗಲೇ ನಾವು ತಿಳಿದುಕೊಂಡಿರುವಂತಹ ವಿಚಾರ. ಇದಕ್ಕೆ ಇನ್ನೊಂದು ಸಾಮಗ್ರಿ ಸೇರ್ಪಡೆ ಮಾಡಿದರೆ ಅದರ ಲಾಭವು ದುಪ್ಪಟ್ಟು ಆಗುವುದು. ಬೆಳಗ್ಗೆ ಹಲ್ಲುಜ್ಜುವ ಮೊದಲು ಬಿಸಿ ನೀರು ಮತ್ತು ಬೆಲ್ಲ ಹಾಕಿ ಕುಡಿದರೆ ಅದು ಚರ್ಮ ಹಾಗೂ ಆರೋಗ್ಯದ ಮೇಲೆ ಅದ್ಭುತವಾದ ಪರಿಣಾಮ ಬೀರುವುದು…
ಆಯುರ್ವೇದದ ಪ್ರಕಾರ–ಆಯುರ್ವೇದದ ಪ್ರಕಾರ ಬೆಲ್ಲವು ಬಿಸಿನೀರಿನೊಂದಿಗೆ ಸೇವಿಸಿದಾಗ ವಿವಿಧ ರೀತಿಯ ಕಾಯಿಲೆಗಳಿಂದ ತಡೆಯವುದು ಮಾತ್ರವಲ್ಲದೆ, ಇದು ಹೃದಯದ ಆರೋಗ್ಯಕ್ಕೂ ಅದ್ಭುತವಾಗಿ ನೆರವಾಗುವುದು. ಇದು ದೇಹಕ್ಕೆ ಒಳ್ಳೆಯ ಶಕ್ತಿ ನೀಡುವುದು ಮತ್ತು ಆರೋಗ್ಯ ವೃದ್ಧಿಸುವುದು. ಇದನ್ನು ಆಯುರ್ವೇದದಲ್ಲಿ ಹಲವಾರು ಆರೋಗ್ಯ ಲಾಭ ಪಡೆದುಕೊಳ್ಳಲು ಬಳಸಲಾಗಿದೆ. ಬಿಸಿ ನೀರು ಮತ್ತು ಬೆಲ್ಲ ಬಳಸಿಕೊಂಡರೆ ಸಿಗುವ ಲಾಭಗಳು ಯಾವುದು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.
ತೂಕ ಇಳಿಸಲು ಸಹಕಾರಿ–ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಾ ಇರುವವರಿಗೆ ಇದು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಯಾಕೆಂದರೆ ಇದು ತೂಕ ಹೆಚ್ಚಳಕ್ಕೆ ನೆರವಾಗುವ ಸಕ್ಕರೆಗೆ ಪರ್ಯಾಯವಾಗಿದೆ ಮತ್ತು ಇದರಲ್ಲಿ ಪೊಟಾಶಿಯಂ, ಮೆಗ್ನಿಶಿಯಂ, ವಿಟಮಿನ್ ಬಿ1, ಬಿ6 ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಅಧಿಕ ಕ್ಯಾಲರಿ ಕಡಿಮೆ ಮಾಡುವುದು. ಒಂದು ಗ್ರಾಂ ಸಕ್ಕರೆಯಲ್ಲಿ ಬೆಲ್ಲಕ್ಕಿಂತಲೂ ಹೆಚ್ಚಿನ ಕ್ಯಾಲರಿ ಇದೆ. ಬೆಲ್ಲವನ್ನು ಚಾ, ಕಾಫಿ ಮತ್ತು ಇತರ ಹಲವಾರು ರೀತಿಯ ಸಿಹಿ ತಿಂಡಿಗಳ ತಯಾರಿಸಲು ಬಳಕೆ ಮಾಡಬಹುದು. ಇದು ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ, ಆಹಾರಕ್ಕೆ ರುಚಿ ಕೂಡ ನೀಡುವುದು. ಮಲಗುವ ಮೊದಲು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಅದರಿಂದ ಹಲವಾರು ಲಾಭಗಳು ಸಿಗುವುದು.
ಹೊಟ್ಟೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ–ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ನೀವು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಅದು ಸಮಸ್ಯೆ ನಿವಾರಣೆ ಮಾಡುವುದು. ರಾತ್ರಿ ಮಲಗುವ ಮೊದಲು ಇದನ್ನು ಕುಡಿಯಿರಿ. ಜೀರ್ಣಕ್ರಿಯೆಗೆ ಇದು ವೇಗ ನೀಡುವುದು ಮಾತ್ರವಲ್ಲದೆ, ಪ್ರತಿನಿತ್ಯ ಬೆಳಗ್ಗೆ ಮಲವಿಸರ್ಜನೆ ಮಾಡಲು ಸಹಕರಿಸುವುದು. ಭಾರತೀಯರು ಹೆಚ್ಚಾಗಿ ತಮ್ಮ ಊಟದ ಅಂತ್ಯದಲ್ಲಿ ಬೆಲ್ಲ ಸೇವನೆ ಮಾಡುವಂತಹ ಕ್ರಮವಿದೆ. ಇದು ದೇಹದಲ್ಲಿ ಇರುವಂತಹ ಜೀರ್ಣಕ್ರಿಯೆ ಕಿಣ್ವಗಳನ್ನು ಉತ್ತೇಜಿಸಿ ಜೀರ್ಣಕ್ರಿಯೆಗೆ ಸಹಕರಿಸುವುದು.
ನಿದ್ರಾಹೀನತೆ ನಿವಾರಿಸಲು ನೆರವಾಗುವುದು–ಬೆಲ್ಲವು ಖಿನ್ನತೆ ವಿರೋಧಿ ಗುಣ ಹೊಂದಿದೆ. ಬಿಸಿ ನೀರಿನ ಜತೆಗೆ ರಾತ್ರಿ ಮಲಗುವ ಮೊದಲು ಕುಡಿದರೆ ಅದು ದೇಹದಲ್ಲಿ ಒಳ್ಳೆಯ ಹಾರ್ಮೋನ್ ಬಿಡುಗಡೆ ಮಾಡುವುದು. ಖಿನ್ನತೆಗೆ ಒಳಗಾಗಿರುಂತಹ ಜನರಿಗೆ ರಾತ್ರಿ ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು. ನಿದ್ರಾಹೀನತೆಗೆ ಶತಮಾನಗಳಿಂದಲೂ ಬೆಲ್ಲವನ್ನು ಮನೆಮದ್ದಾಗಿ ಬಳಸಿಕೊಂಡು ಬರಲಾಗುತ್ತಾ ಇದೆ
ಬಾಯಿಯ ಕಾಯಿಲೆ ನಿವಾರಿಸುವುದು–ಬೆಲ್ಲವು ಕಡಿಮೆ ಸಿಹಿ ಹೊಂದಿದೆ ಮತ್ತು ಸಕ್ಕರೆಗೆ ಹೋಲಿಕೆ ಮಾಡಿದರೆ ಇದರಲ್ಲಿ ಕೊಬ್ಬಿನಾಂಶವು ಕಡಿಮೆ. ಸಕ್ಕರೆ ಬದಲಿಗೆ ಬೆಲ್ಲ ತಿಂದರೆ ಅದರಿಂದ ಬಾಯಿ ಹಾಗೂ ಒಸಡುಗಳ ಆರೋಗ್ಯವು ಉತ್ತಮವಾಗಿ ಇರುವುದು. ಬೆಲ್ಲವನ್ನು ಏಲಕ್ಕಿ ಜತೆಗೆ ಸೇರಿಸಿಕೊಂಡು ತಿಂದರೆ ಅದು ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಬಾಯಿಯ ದುರ್ವಾಸನೆಯು ತುಂಬಾ ಕೆಟ್ಟದು ಮತ್ತು ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾ ನಿವಾರಣೆ ಮಾಡಿದರೆ ಅದರಿಂದ ಬಾಯಿಗೆ ಸಂಬಂಧಿಸಿದ ಹಲವಾರು ಸಮಸ್ಯೆ ನಿವಾರಿಸಬಹುದು. ಬೆಲ್ಲವನ್ನು ಮಿತವಾಗಿ ಬಳಸಿದರೆ ಬಾಯಿಗೆ ತುಂಬಾ ಒಳ್ಳೆಯದು.
ಚರ್ಮದ ಆರೈಕೆಗೆ–ಮೊಡವೆ ಮತ್ತು ಚರ್ಮವು ವರ್ಣಗುಂದುವ ಸಮಸ್ಯೆಯಿದ್ದರೆ ಆಗ ನೀವು ಬಿಸಿ ನೀರಿಗೆ ಹಾಕಿಕೊಂಡು ಬೆಲ್ಲ ಸೇವಿಸಬೇಕು. ಇದು ಶುದ್ಧೀಕರಿಸುವ ಗುಣ ಹೊಂದಿದೆ ಮತ್ತು ಚರ್ಮದ ಸಮಸ್ಯೆಯನ್ನು ದೂರ ಮಾಡಲು ಇದು ಅದ್ಭುತವಾದ ಮನೆಮದ್ದಾಗಿದೆ. ಇದು ವಯಸ್ಸಾಗುವ ಲಕ್ಷಣಗಳನ್ನು ಕೂಡ ತಡೆಹಿಡಿಯುವುದು.
ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಗೆ ಪರಿಹಾರ—ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ನಿವಾರಣೆ ಮಾಡಲು ನೀವು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಆರೋಗ್ಯಕ್ಕೆ ಅದ್ಭುತವನ್ನು ಉಂಟು ಮಾಡುವುದು. ಇದು ಕಲ್ಲನ್ನು ವಿಘಟಿಸುವುದು. ಸಣ್ಣ ಗಾತ್ರದ ಕಲ್ಲನ್ನು ಮೂತ್ರದ ಮೂಲಕ ಹೊರಹಾಕಲು ಇದು ಸಹಕಾರಿ ಆಗಿರುವುದು.