ಎದೆಯಲ್ಲಿ ಕಟ್ಟಿದ ಕಫ ಕರಗಿಸಲು ಮನೆಮದ್ದು, ಶೀತ ನೆಗಡಿ ಕೆಮ್ಮು ಕಫಕ್ಕೆ!

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು ಅಸ್ತಮಾ, ಬ್ರಾಂಕೈಟಿಸ್ ಮತ್ತು ನಿಯಂತ್ರಣಕ್ಕೆ ಬಾರದಷ್ಟು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ ಗಿಡಮೂಲಿಕೆಯಾಗಿದ್ದು ತುಂಬಾ ಶಕ್ತಿಯುತವಾದ ಸಸ್ಯವಾಗಿದೆ.

“ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಗಾದೆ ಮಾತಿನಂತೆ ಸಾಮಾನ್ಯವಾಗಿ ಆಡುಗಳು ತಿನ್ನದ ಸೊಪ್ಪು, ತರಕಾರಿಗಳಿಲ್ಲ. ಆದರೆ ಈ ವಾಸಕ ಗಿಡದ ಎಲೆ, ಹೂಗಳನ್ನು ಆಡು ತಿನ್ನುವುದಿಲ್ಲ. ಅದಕ್ಕಾಗಿ ಆಡು ಸೋಕದ ಈ ಗಿಡಕ್ಕೆ ಕನ್ನಡದಲ್ಲಿ ಆಡುಸೋಗೆ ಎಂಬ ಹೆಸರು ಬಂದಿದೆ.

ಉಸಿರಾಟದ ತೊಂದರೆ, ಕೆಮ್ಮು ಮತ್ತು ಶೀತ, ಗಂಟಲು ನೋವು, ಆಸ್ತಮಾ, ಬ್ರಾಂಕೈಟಿಸ್, ಶ್ವಾಸೇಂದ್ರಿಯ ಸೋಂಕುಗಳು, ರಕ್ತಸ್ರಾವದ ಕಾಯಿಲೆಗಳು ಮುಂತಾದ ಆರೋಗ್ಯ ವೈಪರೀತ್ಯಗಳಿಗೆ ಈ ಸಸ್ಯೌಷಧವು ಅಂತಿಮ ಪರಿಹಾರ ಕ್ರಮವಾಗಿದೆ.

ಆಡುಸೋಗೆ ಸೊಪ್ಪಿನ ರಸಕ್ಕೆ ಬೆಲ್ಲ ಬೆರೆಸಿ ಕುಡಿದರೆ ಜ್ವರ ಕಮ್ಮಿಯಾಗುತ್ತದೆ.

ಒಂದು ಹಿಡಿ ಆಡುಸೋಗೆ ಎಲೆ, ಸ್ವಲ್ಪ ಬೆಲ್ಲ ಮತ್ತು ಒಂದು ಚಮಚ ಒಣಶುಂಠಿ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ. ಅದು ಒಂದು ಲೋಟ ಆದಮೇಲೆ ಕಾಲು ಲೋಟದಂತೆ ದಿನಕ್ಕೆ ನಾಲ್ಕು ಬಾರಿ ಕುಡಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಆಡುಸೋಗೆ, ಅರಸಿನ, ಧನಿಯಾ, ಅಮೃತ ಬಳ್ಳಿ, ಭಾರಂಗಿ, ಹಿಪ್ಪಲಿಗಳಿಂದ ತಯಾರಿಸಿದ ಕಷಾಯವನ್ನು ಸೇವಿಸಿದರೆ ಉಬ್ಬಸದ ತೊಂದರೆ ಕಮ್ಮಿಯಾಗುತ್ತದೆ.

ಮೂರು ಹಿಡಿ ಆಡುಸೋಗೆ ಎಲೆ, ಸ್ವಲ್ಪ ಹಿಪ್ಪಲಿ, ಸ್ವಲ್ಪ ಕಾಳುಮೆಣಸು, ಸ್ವಲ್ಪ ಜ್ಯೇಷ್ಠ ಮಧು, ಸ್ವಲ್ಪ ಶುಂಠಿ ಹಾಕಿ ಚೂರ್ಣವನ್ನು ಮಾಡಿ 2 ಲೀಟರ್ ನೀರಿಗೆ ಹಾಕಿ ಕುದಿಸಬೇಕು. ಅದು ಕಾಲು ಭಾಗಕ್ಕೆ ಇಳಿದ ಮೇಲೆ ನಾಲ್ಕು ಚಮಚದಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಗಟ್ಟಿಯಾದ ಕಫ ನಿವಾರಣೆಯಾಗುತ್ತದೆ.

ಬಿಸಿ ಮಾಡಿದ ಐದು ಚಮಚ ಆಡುಸೋಗೆ ಸೊಪ್ಪಿನ ರಸಕ್ಕೆ ನಾಲ್ಕು ಚಿಟಿಕೆ ಹಿಪ್ಪಲಿ ಪುಡಿ, ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಒಣಕೆಮ್ಮು ಗುಣವಾಗುವುದು.

ಹಣ್ಣಾದ ಆಡುಸೋಗೆ ಎಲೆಗಳ ರಸ ಐದು ಚಮಚ, ಜೇನು ತುಪ್ಪ ಒಂದು ಚಮಚ, ಸೈಂಧವ ಲವಣ ಮೂರು ಚಿಟಿಕೆ ಇವೆಲ್ಲವನ್ನೂ ಸೇರಿಸಿ 1 ಚಮಚದಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಶ್ವಾಸಕೋಶದ ತೊಂದರೆ ನಿವಾರಣೆಯಾಗುತ್ತದೆ.

Leave a Comment