ಚೆಂದದ ಹಾಗೂ ಉದ್ದ ಕೂದಲು ಪಡೆಯಬೇಕೆಂದು ಎಲ್ಲರಿಗೂ ಅನ್ನಿಸುತ್ತದೆ. ಆದರೆ ಬದಲಾದ ಜೀವನಶೈಲಿ, ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡದೇ ಇರುವುದು, ರಾಸಾಯನಿಕ ಪದಾರ್ಥಗಳಿರುವ ಶಾಂಪೂಗಳ ಬಳಕೆಯಿಂದ ಉದ್ದ ಕೂದಲು ಹಾಳಾಗುತ್ತದೆ.
ಅಲ್ಲದೆ ಹೊಟ್ಟು, ಒಣ ಕೂದಲು, ತುರಿಕೆಯಂತಹ ಸಮಸ್ಯೆಗಳಿಂದ ಹೆಚ್ಚು ಕೂದಲು ಉದುರುತ್ತದೆ. ಆದ್ದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ತಲೆಗೆ ಎಣ್ಣೆ ಹಚ್ಚುವುದು ಸಹಜ. ಆದರೆ ಕೂದಲಿಗೆ ಎಣ್ಣೆ ಹಚ್ಚುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು, ಕೂದಲಿನ ಆರೈಕೆ ಬಗ್ಗೆ ಆಯುರ್ವೇದ ಹೇಳುವುದೇನು ಎನ್ನುವ ಬಗ್ಗೆ ಡಾ. ಐಶ್ವರ್ಯ ಮಾಹಿತಿ ಹಂಚಿಕೊಂಡಿದ್ದಾರೆ ಇಲ್ಲಿದೆ ನೋಡಿ.
ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗುವುದು
ಕೆಲವರಿಗೆ ಅಭ್ಯಾಸವಿರುತ್ತದೆ,ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ, ಬೆಳಗ್ಗೆ ಎನ್ನುವಷ್ಟರಲ್ಲಿ ಎಣ್ಣೆ ಚೆನ್ನಾಗಿ ತಲೆಗೆ ಹೀರಿಕೊಳ್ಳುತ್ತದೆ ಎಂದು. ಆದರೆ ಈ ರೀತಿ ರಾತ್ರಿ ಎಣ್ಣೆ ಹಚ್ಚಿ ಮಲಗುವುದರಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ. ಕೂದಲು ಜಡವಾದಂತೆ ಆಗಬಹುದು.
ಅಲ್ಲದೆ ಸೈನಸ್, ಕುತ್ತಿಗೆ ನೋವು, ತಲೆಭಾರದಂತಹ ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಆದ್ದರಿಂದ ರಾತ್ರಿಯಿಡೀ ತಲೆಗೆ ಎಣ್ಣೆ ಹಚ್ಚಿ ಮಲಗುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.
ಸ್ನಾನದ ಬಳಿಕ ಎಣ್ಣೆ ಹಚ್ಚುವುದು
ಕೂದಲಿಗೆ ಎಣ್ಣೆ ಒಳ್ಳೆಯದೇ. ಆದರೆ ಯಾವಾಗ ಹಚ್ಚಿದರೆ ಒಳ್ಳೆಯದು ಎನ್ನುವುದು ತಿಳಿದಿರಬೇಕು. ಸ್ನಾನದ ನಂತರ ಒದ್ದೆ ಕೂದಲಿಗೆ ಅಥವಾ ತುಸು ಹಸಿಯಾಗಿರುವಾಗಲೇ ಎಣ್ಣೆ ಹಚ್ಚುವ ತಪ್ಪನ್ನು ಎಂದಿಗೂ ಮಾಡಬೇಡಿ.
ಇದರಿಂದ ಕೂದಲಿಗೆ ಇನ್ನಷ್ಟು ಧೂಳು ಅಂಟಿಕೊಳ್ಳುತ್ತದೆ. ಅಲ್ಲದೆ ಅದಾಗಲೇ ತಲೆ ಒದ್ದೆಯಾಗಿರುವುದರಿಂದ ಮತ್ತೆ ಎಣ್ಣೆ ಹಾಕಿದಾಗ ತಂಪಿನ ಅಂಶ ಜಾಸ್ತಿಯಾಗಿ ತಲೆನೋವು ಬರಬಹುದು.
ಕೂದಲಿಗೆ ಮಾತ್ರ ಎಣ್ಣೆ ಹಚ್ಚುವುದು
ಕೂದಲಿನ ಬುಡಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ರಕ್ತಸಂಚಾರ ಉತ್ತಮವಾಗುತ್ತದೆ. ಇದರಿಂದ ಕೂದಲು ಉದುರುವುದು, ಹೊಟ್ಟು ಎಲ್ಲವೂ ನಿವಾರಣೆಯಾಗುತ್ತದೆ. ಅದರ ಬದಲು ನೀವು ಕೂದಲಿನ ತುದಿಗೆ ಮಾತ್ರ ಎಣ್ಣೆ ಹಚ್ಚಿದರೆ ಉಪಯೋಗವಿಲ್ಲ.
ಅಲ್ಲದೆ ಈ ರೀತಿ ಉದ್ದ ಕೂದಲಿಗೆ ಎಣ್ಣೆ ಹಚ್ಚಿದರೆ ಧೂಳು ಬೇಗನೆ ಅಂಟಿಕೊಂಡು ಸೀಳು ಕೂದಲು ಉಂಟಾಗಲು ಕಾರಣವಾಗುತ್ತದೆ.
ಕೂದಲಿನ ಆರೈಕೆ
ಪದೇ ಪದೇ ಎಣ್ಣೆಯನ್ನು ಬದಲಿಸುವುದು
ಯಾರೋ ಹೇಳುತ್ತಾರೆ ಎಂದು ನಿಮ್ಮ ಕೂದಲಿಗೆ ಅಥವಾ ತಲೆಗೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಎಣ್ಣೆಗಳನ್ನು ಹಚ್ಚಬೇಡಿ. ಇದರಿಂದ ಕೂದಲು ಹಾಳಾಗುತ್ತದೆ. ಪದೇ ಪದೇ ಎಣ್ಣೆಯನ್ನು ಬದಲಾಯಿಸುವುದರಿಂದ ತಲೆಯೆ ಮೇಲೆ ಪರಿಣಾಮ ಬೀರುತ್ತದೆ.
ಅಲ್ಲದೆ ಕೆಲವು ಎಣ್ಣೆಗಳು ಶುದ್ಧವಾಗಿರುವುದಿಲ್ಲ. ಹೀಗಾಗಿ ಅತಿಯಾಗಿ ಕೂದಲು ಉದುರಲು ಕಾರಣವಾಗಬಹುದು. ಕೂದಲಿಗೆ ಸರಿಹೊಂದುವ ಯಾವುದ್ದರೂ ಒಂದು ಎಣ್ಣೆಯನ್ನು ಬಳಸಿ. ಈ ಬಗ್ಗೆ ನೀವು ವೈದ್ಯರ ಸಲಹೆ ಪಡೆಯಬಹುದು.
ಬಿಸಿ ನೀರಿನ ಸ್ನಾನ
ದೇಹಕ್ಕೆ ಬಿಸಿ ನೀರಿನದ ಸ್ನಾನ ಹಿತ ನೀಡುವುದೆಂದು ತಲೆಗೆ ಅಲ್ಲ. ತಲೆಗೆ ನೀವೇನಾದರೂ ಬಿಸಿ ನೀರನ್ನು ಬಳಸುತ್ತಿದ್ದರೆ ಇಂದೇ ಆ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ ನೀವು ಬಿಸಿ ನೀರಿನ್ನು ತಲೆಗೆ ಹಾಕಿದಾಗ ಕೂದಲಿನ ಬುಡ ಸಡಿಲವಾಗುತ್ತದೆ. ಇದರಿಂದ ಹೆಚ್ಚು ಕೂದಲು ಉದುರುತ್ತದೆ.
ಅಲ್ಲದೆ ಬಿಸಿ ನೀರು ಕೂದಲನ್ನು ಡ್ರೈ ಆಗುವಂತೆ ಮಾಡುತ್ತದೆ. ಆದ್ದರಿಂದ ಕೂದಲಿನ ರಕ್ಷಣೆ ಮಾಡಿಕೊಳ್ಳಬೇಕೆಂದರೆ ಬಿಸಿ ನೀರಿನ ಬದಲು ತಲೆಗೆ ತಣ್ಣನೆಯ ನೀರನ್ನು ಹಾಕಿ ಸ್ನಾನ ಮಾಡಿ. ಒಣ ಬಟ್ಟೆಯಲ್ಲಿ ಒರೆಸಿಕೊಳ್ಳಿ. ನೆನೆಪಿಡಿ ಹೇರ್ ಡ್ರೈಯರ್ನಂತಹ ಉಪಕರಣಗಳನ್ನು ಕೂದಲು ಒಣಗಿಸಲು ಬಳಸಬೇಡಿ. ಇದರಿಂದಲೂ ಕೂದಲು ಉದುರುತ್ತದೆ.