ವಾಕಿಂಗ್ vs ರನ್ನಿಂಗ್ 100% ಅರೋಗ್ಯಕ್ಕಾಗಿ ಏನು ಮಾಡಬೇಕು!

ಹೃದಯದ ಬಡಿತದ ಗತಿಯನ್ನು ಹೆಚ್ಚಿಸುವ ವ್ಯಾಯಾಮಗಳಲ್ಲಿ ಓಟ ಮತ್ತು ನಡಿಗೆ ಪ್ರಮುಖವಾಗಿವೆ. ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗಂತೂ ಇವೆರಡೂ ವ್ಯಾಯಾಮಗಳು ನಿತ್ಯದ ಅಭ್ಯಾಸಗಳೇ ಆಗಬೇಕು. ಈ ಉದ್ದೇಶವಿಲ್ಲದಿದ್ದರೂ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲಾದರೂ ನಡಿಗೆ ಮತ್ತು ನಿಧಾನಗತಿಯ ಓಟವನ್ನು ನಿತ್ಯದ ಅಭ್ಯಾಸವಾಗಿಸುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಆದರೆ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಇದು ಕೊಂಚ ಗೊಂದಲದ ಆಯ್ಕೆಯಾಗಿರುತ್ತದೆ.

ಮೊದಲನೆಯದು ಅತಿ ಕಡಿಮೆ ಶ್ರಮವನ್ನು ಪಡೆದು ನಿಧಾನಗತಿಯಲ್ಲಿ ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತದೆ. ಎರಡನೆಯದು ದೇಹವನ್ನು ಶ್ರಮದ ಮಿತಿಗಳಿಗೆ ಒಡ್ಡಿಕೊಳ್ಳುವ ಮೂಲಕ ದೇಹದ ಎಲ್ಲಾ ವ್ಯವಸ್ಥೆಗಳನ್ನು ಗರಿಷ್ಟ ಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡಲಾಗುತ್ತದೆ. ಮೊದಲ ವಿಧಾನ ನಿಮ್ಮ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ನೀಡದೇ ಇದ್ದರೆ ಅಥವಾ ಎರಡನೆಯ ವಿಧಾನದಿಂದ ಹೃದಯ ಮತ್ತು ಇತರ ಅಂಗಗಳಿಗೆ ತೊಂದರೆಯೇನೂ ಆಗುವುದಿಲ್ಲವೇ ಎಂಬ ದುಗುಡ ಮತ್ತು ಗೊಂದಲವೂ ಎದುರಾಗಬಹುದು. ಇಂದಿನ ಲೇಖನದಲ್ಲಿ ಈ ಗೊಂದಲವನ್ನು ನಿವಾರಿಸಲು ತಜ್ಞರು ಒದಗಿಸಿದ ಮಾಹಿತಿಯನ್ನು ನೀಡಲಾಗಿದೆ. ಬನ್ನಿ, ನೋಡೋಣ:

​ನಡಿಗೆ ಮತ್ತು ಓಟದ ಆರೋಗ್ಯಕರ ಪ್ರಯೋಜನಗಳು

ನಡಿಗೆ ಮತ್ತು ಓಟ ಇವೆರಡರಿಂದಲೂ ಹೆಚ್ಚೂ ಕಡಿಮೆ ಒಂದೇ ಬಗೆಯ ಪ್ರಯೋಜನಗಳು ದೊರಕುತ್ತವೆ. ಇವೆರಡರ ನಡುವೆ ಪ್ರಮುಖ ವ್ಯತ್ಯಾಸ ಎಂದರೆ ಒಂದು ಅವಧಿಯಲ್ಲಿ ಬಳಸಲಾಗುವ ಕ್ಯಾಲೋರಿಗಳ ಪ್ರಮಾಣ ಮಾತ್ರ. ಇವೆರಡೂ ನಮ್ಮ ಹೃದಯದ ಆರೋಗ್ಯಕ್ಕೆ ಉತ್ತಮವಾಗಿವೆ. ಸ್ನಾಯುಗಳನ್ನು ಸಡಿಲಿಸಲು ಹಾಗೂ ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಇದರ ಜೊತೆಗೇ ದೇಹದಾರ್ಢ್ಯತೆ ಹೆಚ್ಚಿಸಲು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಹಾಗೂ ಈಗಾಗಲೇ ಇರುವ ಇತರ ಆರೋಗ್ಯ ಸಂಬಂಧಿ ತೊಂದರೆಗಳನ್ನು ನಿರ್ವಹಿಸಲೂ ನೆರವಾಗುತ್ತದೆ.

​ತೂಕ ಇಳಿಕೆಗೆ ನಡಿಗೆ ಅಥವಾ ಓಟ ಯಾವುದು ಒಳ್ಳೆಯದು?

ಒಂದು ವೇಳೆ ತೂಕ ಇಳಿಕೆ ಮಾತ್ರವೇ ನಿಮ್ಮ ಮುಖ್ಯ ಉದ್ದೇಶವಾಗಿದ್ದರೆ ಓಟ ನಿಮಗೆ ಹೆಚ್ಚಿನ ಫಲವನ್ನು ನೀಡುತ್ತದೆ. ಏಕೆಂದರೆ ಇದು ಹೆಚ್ಚಿನ ಕ್ಯಾಲೋರಿಗಳನ್ನು ದಹಿಸುತ್ತದೆ. ಇಷ್ಟೇ ಪ್ರಮಾಣದ ಕ್ಯಾಲೋರಿಗಳನ್ನು ದಹಿಸಲು ಇದಕ್ಕೂ ದುಪ್ಪಟ್ಟು ದೂರವನ್ನು ನಡಿಗೆಯ ಮೂಲಕ ಕ್ರಮಿಸಬೇಕಾಗುತ್ತದೆ. ಸುಮಾರು ಎಪ್ಪತ್ತೆರಡು ಕೇಜಿ ತೂಕದ ವ್ಯಕ್ತಿ ಪ್ರತಿ ಘಂಟೆಗೆ ಐದು ಮೈಲಿ ವೇಗದಲ್ಲಿ ಓಡುವ ಮೂಲಕ ಸುಮಾರು ಆರುನೂರು ಕ್ಯಾಲೋರಿಗಳನ್ನು ದಹಿಸಬಹುದು.

ಒಂದು ವೇಳೆ ನೀವು ನಿಮ್ಮ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಲು ಇಚ್ಛಿಸಿದರೆ ನಿತ್ಯವೂ ಮೂವತ್ತು ನಿಮಿಷಗಳಷ್ಟು ಕಾಲ ನಡೆದರೆ ಸಾಕಾಗುತ್ತದೆ. ಸಾಮಾನ್ಯ ತೂಕದ ವ್ಯಕ್ತಿ ಘಂಟೆಗೆ ಎರಡು ಮೈಲಿ ವೇಗದಲ್ಲಿ ನಡೆಯುವ ಮೂಲಕ ಘಂಟೆಗೆ 133 ಕ್ಯಾಲೋರಿಗಳನ್ನು ದಹಿಸುತ್ತಾನೆ. ಈ ವೇಗ ಹೆಚ್ಚಿದಷ್ಟೂ ಕ್ಯಾಲೋರಿಗಳು ದಹಿಸಲ್ಪಡುವ ಗತಿಯೂ ಹೆಚ್ಚುತ್ತದೆ.

​ಹಾಗಾದರೆ ಯಾವ ವ್ಯಕ್ತಿಗಳು ಯಾವುದನ್ನು ಆಯ್ದುಕೊಳ್ಳಬೇಕು?

ಒಂದು ವೇಳೆ ನೀವು ವ್ಯಾಯಾಮವನ್ನು ನಿತ್ಯದ ಅಭ್ಯಾಸವನ್ನಾಗಿ ಇತ್ತೀಚಿಗಷ್ಟೇ ಪ್ರಾರಂಭಿಸಿದ್ದರೆ ನಿಮ್ಮ ತೂಕ ಇಳಿಕೆಯ ಪ್ರಯತ್ನಗಳು ನಡಿಗೆಯಿಂದಲೇ ಪ್ರಾರಂಭವಾಗುವುದು ಆರೋಗ್ಯಕರವಾಗಿದೆ. ನಡಿಗೆ ನಿಮಗೆ ಅಭ್ಯಾಸವಾದ ಬಳಿಕ ನಿಧಾನವಾಗಿ ಈ ಗತಿಯನ್ನು ಕೊಂಚವೇ ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ಈ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳನ್ನು ದಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವಾರ ಅಥವಾ ಎರಡು ವಾರಗಳ ಬಳಿಕ, ನೀವು ನಿಮ್ಮ ನಡಿಗೆಯ ಜೊತೆಗೇ ಓಟವನ್ನೂ ಅಳವಡಿಸಿಕೊಳ್ಳಿ. ಆದರೆ ಹೆಚ್ಚು ದೂರ ಓಡದೇ ಕೊಂಚ ದೂರದ ಓಟದ ಬಳಿಕ ವಿಶ್ರಾಂತಿ ಪಡೆದು ಮತ್ತೆ ಮುಂದುವರೆಯುವ ಮೂಲಕ ಸಾಕಷ್ಟು ಕ್ಯಾಲೋರಿಗಳನ್ನು ದಹಿಸಬಹುದು.

ಒಂದು ವೇಳೆ ನಿಮ್ಮ ವಯಸ್ಸು ಐವತ್ತು ದಾಟಿದ್ದರೆ ಅಥವಾ ನಿಮಗೆ ಯಾವುದಾದರೂ ಹೃದಯ ಸಂಬಂಧಿತ ತೊಂದರೆ ಇದ್ದರೆ ಅಥವಾ ಸಂಧಿವಾತ ಮೊದಲಾದ ತೊಂದರೆಗಳು ಇದ್ದರೆ ನೀವು ಕೇವಲ ನಡಿಗೆಯನ್ನು ಮಾತ್ರವೇ ಅನುಸರಿಸಬೇಕು. ಓಟದಿಂದ ಸೊಂಟದ ಮೂಳೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಹಾಗೂ ಇದು ನಿಮ್ಮ ಈಗಿರುವ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.

​ಅಂತಿಮವಾಗಿ

ನೀವು ಕೇವಲ ವ್ಯಾಯಾಮ ಮಾಡುವ ಮೂಲಕ ಮಾತ್ರವೇ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಆಹಾರಕ್ರಮವೂ ಈ ಪ್ರಯತ್ನಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮ ಆರೋಗ್ಯಕರ ಹಾಗೂ ಪೌಷ್ಟಿಕವಾಗಿರಬೇಕು. ಅಲ್ಲದೇ ನೀವು ಸೇವಿಸುವ ಆಹಾರದಲ್ಲಿ ಕಡಿಮೆ ಕ್ಯಾಲೋರಿಗಳಿದ್ದು ಹೆಚ್ಚು ಪೌಷ್ಟಿಕ ಮತ್ತು ನಾರಿನಂಶ ಇರುವಂತೆ ನೋಡಿಕೊಳ್ಳಿ.

Leave a Comment