ಗಣಪತಿ ವಿಘ್ನನಿವಾರಕ ಮತ್ತು ಪ್ರಥಮ ಪೂಜೆ ಸಲ್ಲುವುದೇ ವಿಘ್ನೇಶನಿಗೆ. ಇನ್ನು, ತುಳಸಿ ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರ. ಆದರೆ, ಈ ಗಣಪತಿ ಮತ್ತು ತುಳಸಿ ಪರಸ್ಪರ ಶಾಪ ನೀಡಿದ್ದರು. ಪುರಾಣದಲ್ಲಿ ಇಂತಹದ್ದೊಂದು ಶಾಪದ ಕಥೆ ಸಿಗುತ್ತದೆ.
ಹಿಂದೂ ಧರ್ಮದಲ್ಲಿ ಪ್ರಥಮ ಪೂಜೆ ಸಲ್ಲುವುದು ಪಾರ್ವತಿ ಸುತ ವಿನಾಯಕನಿಗೆ. ಗಣಪತಿಯ ಆಶೀರ್ವಾದವಿದ್ದರೆ ಎಲ್ಲಾ ಸಂಕಟಗಳೂ ದೂರವಾಗುತ್ತದೆ ಎಂಬುದು ನಂಬಿಕೆ. ಇನ್ನು ತುಳಸಿಗೂ ನಮ್ಮಲ್ಲಿ ಅಷ್ಟೇ ಪ್ರಾಮುಖ್ಯತೆ ಇದೆ. ತುಳಸಿಯಲ್ಲಿ ಲಕ್ಷ್ಮಿಯ ಸಾನಿಧ್ಯವಿದೆ ಎಂಬುದು ನಂಬಿಕೆ. ಬಹುತೇಕ ಪೂಜಾ ಕೈಂಕರ್ಯಗಳಲ್ಲಿ ತುಳಸಿಯನ್ನು ಬಳಸಲಾಗುತ್ತದೆ. ಆದರೆ, ಪ್ರಥಮ ವಂದಿತ ಗಣಪತಿಯ ಪೂಜೆಗೆ ತುಳಸಿಯನ್ನು ಬಳಸುವುದಿಲ್ಲ…
ಯಾಕೆ ಗಣಪತಿಯ ಪೂಜೆಗೆ ತುಳಸಿಯನ್ನು ಬಳಸುವುದಿಲ್ಲ…? ಹೀಗೆಂದು ಕೇಳಿದರೆ ಪುರಾಣದ ಒಂದು ಕಥೆ ತೆರೆದುಕೊಳ್ಳುತ್ತದೆ. ಅದು ಪರಸ್ಪರ ಶಾಪದ ಕಥೆ. ತುಳಸಿ ರಾಜನೊಬ್ಬನ ಪುತ್ರಿ. ಅಷ್ಟೇ ಸುಂದರಿ ಕೂಡಾ. ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದ ಈ ರಾಜ ತನ್ನ ಪುತ್ರಿಗೂ ಸದ್ವಿಚಾರಗಳನ್ನು ಕಳಿಸಿ ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದನು. ತುಳಸಿ ವಿಷ್ಣು ದೇವರ ಪರಮ ಭಕ್ತೆ. ಹೀಗಾಗಿ, ಶ್ರೀಮನ್ನಾರಾಯಣ ದೇವರ ಪೂಜೆಗೆಂದು ತುಳಸಿ ಗಂಗಾನದಿಯ ತಡಕ್ಕೆ ಬಂದು ತಪ್ಪಸ್ಸು ಮಾಡುತ್ತಿದ್ದಳು. ಒಂದು ದಿನ ಹೀಗೆಯೇ ಪೂಜೆಗೆಂದು ಬಂದಿದ್ದಂತಹ ಸಂದರ್ಭದಲ್ಲಿ ತುಳಸಿ ಧ್ಯಾನ ಮಗ್ನನಾಗಿದ್ದ ಸುಂದರ ಗಣಪತಿಯನ್ನು ಕಂಡಿದ್ದಳು. ಗಣಪನ ಸೌಂದರ್ಯಕ್ಕೆ ಮನಸೋತ ತುಳಸಿ ತನ್ನನ್ನು ವರಿಸುವಂತೆ ಕೇಳಿಕೊಂಡಳು.
ಗಣಪತಿ ಬ್ರಹ್ಮಚಾರಿ. ಹೀಗಾಗಿ, ತುಳಸಿಯ ವಿವಾಹದ ಪ್ರಸ್ತಾಪವನ್ನು ಗಣಪತಿ ಒಪ್ಪಿಕೊಳ್ಳುವುದಿಲ್ಲ. ಆಗ ತನ್ನ ನಿವೇದನೆಯನ್ನು ನಿರಾಕರಿಸಿದ ಗಣಪತಿಯ ಮೇಲೆ ಸಿಟ್ಟಾದ ತುಳಸಿ ನಿನ್ನ ಇಚ್ಛೆಗೆ ವಿರುದ್ಧವಾಗಿ ಇಬ್ಬರು ಹೆಂಡತಿಯರನ್ನು ವರಿಸು' ಎಂದು ಶಾಪಕೊಟ್ಟಳು. ಇದರಿಂದ ಸಿಟ್ಟಾದ ಗಣಪತಿ ತುಳಸಿ ತನಗಿತ್ತ ಶಾಪಕ್ಕೆ ಪ್ರತಿಯಾಗಿ
ನೀನು ರಕ್ಕಸನನ್ನು ಮದುವೆಯಾಗು’ ಎಂದು ಶಪಿಸಿದನು.
ಕೋಪದ ಭರದಲ್ಲಿ ಇಬ್ಬರೂ ಶಾಪವನ್ನು ಕೊಟ್ಟುಕೊಂಡಿದ್ದರು. ಆದರೆ, ಬಳಿಕ ಇಬ್ಬರ ಕೋಪವೂ ತಣ್ಣಗಾಯಿತು. ತುಳಸಿ ಅಳಲು ಆರಂಭಿಸಿದಳು ಮತ್ತು ಗಣೇಶನ ಬಳಿ ಕ್ಷಮೆಯನ್ನೂ ಯಾಚಿಸಿದಳು. ಅಷ್ಟರಲ್ಲಿ ಗಣಪತಿಗೂ ಹೃದಯ ಕರಗಿತ್ತು. ಹೀಗಾಗಿ, ಗಣಪತಿ ತುಳಸಿಗೆ `ದೇವತೆಗಳ ಅನುಗ್ರಹದಿಂದ ನೀನು ಪವಿತ್ರ ಗಿಡವಾಗಿ ಜನಿಸುವೆ. ಎಲ್ಲಾ ದೇವರೂ ನಿಮ್ಮ ಉಪಸ್ಥಿತಿಯಿಂದ ಸಂತೋಷಪಡುತ್ತಾರೆ. ವಿಶೇಷವಾಗಿ ಭಗವಾನ್ ವಿಷ್ಣುವಿಗೆ ಪ್ರಿಯರಾಗುತ್ತೀರಿ. ಆದರೂ ನನ್ನ ಪೂಜೆಯಲ್ಲಿ ನಿನ್ನನ್ನು ಅರ್ಪಿಸುವುದಿಲ್ಲ’ ಎಂದು ಅರಸಿದನು ಎಂಬುದು ನಂಬಿಕೆ.
ಇವರು ಪರಸ್ಪರ ನೀಡಿದ್ದ ಶಾಪ ಕಾರ್ಯರೂಪಕ್ಕೂ ಬಂದಿತ್ತು. ಗಣಪತಿ ಸಿದ್ಧಿ ಬುದ್ಧಿ ಎಂಬ ಇಬ್ಬರನ್ನು ವರಿಸಿದರೆ, ತುಳಸಿ ರಾಕ್ಷಸ ಜಲಂಧರನ ಪತ್ನಿಯಾದಳು. ಬಳಿಕ ಶಿವನಿಂದ ಜಲಂಧರ ವಧಿಸಲ್ಪಟ್ಟ ನಂತರ ತುಳಸಿ ಸಸ್ಯವಾಗಿ ಜನಿಸಿ ಪವಿತ್ರ ಸಸ್ಯದ ಸ್ಥಾನ ಪಡೆದಳು. ತುಳಸಿ ಎಂದರೆ ಭಗವಾನ್ ವಿಷ್ಣುವಿಗೆ ಬಲು ಪ್ರಿಯ. ತುಳಸಿ ಇಲ್ಲದೆ ವಿಷ್ಣುವಿನ ಪೂಜೆ ಅಪೂರ್ಣ ಎಂದೇ ಹೇಳಬಹುದು. ಲಕ್ಷ್ಮಿಯ ಸಾನಿಧ್ಯವೂ ತುಳಸಿಯಲ್ಲಿದೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ಪ್ರತಿ ಹಿಂದೂ ಧರ್ಮೀಯರ ಮನೆಯಲ್ಲಿಯೂ ತುಳಸಿಗೆ ಪ್ರಮುಖ ಸ್ಥಾನವಿದೆ. ತುಳಸಿಯನ್ನು ಪೂಜಿಸದೆ ಹಲವರ ದಿನವೇ ಆರಂಭವಾಗದು.
ಗಣಪತಿ ಮತ್ತು ಶಿವ ದೇವರ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ. ಇನ್ನು ಈ ಪವಿತ್ರ ಸಸ್ಯದ ಎಲೆಯನ್ನು ಏಕಾದಶಿ ಹಾಗೂ ಭಾನುವಾರ ತೆಗೆಯಬಾರದು ಎಂಬ ನಿಯಮ ಕೂಡಾ ಇದೆ. ಜತೆಗೆ, ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣವೂ ಇದೆ.