ಶುಂಠಿ ಹಾಗೂ ಅರಿಶಿನದಲ್ಲಿರುವ ಔಷಧೀಯ ಗುಣಗಳು ನಮಗೆ ತಿಳಿದಿದ್ದರೂ ಅದನ್ನು ಬಳಕೆ ಮಾಡುವಲ್ಲಿ ನಾವು ಹಿಂದೇಟು ಹಾಕುತ್ತೇವೆ. ಕೇವಲ ಅಡುಗೆಯ ರುಚಿ ವೃದ್ಧಿಸಲು ಮಾತ್ರ ಇದನ್ನು ಬಳಸುತ್ತೇವೆ. ಆದರೆ ಶುಂಠಿ ಮತ್ತು ಅರಿಶಿನವನ್ನು ಹಲವಾರು ರೀತಿಯಿಂದ ಮನೆಮದ್ದಾಗಿ ಬಳಸಿಕೊಳ್ಳಬಹುದು. ಶುಂಠಿಯನ್ನು ಬಳಕೆ ಮಾಡಿದ ಸಂದರ್ಭದಲ್ಲಿ ಅದರಿಂದ ಮಧುಮೇಹ, ಶೀತ, ವಾಕರಿಕೆ, ಸಂಧಿತವಾತ ಇತ್ಯಾದಿಗಳ ಲಕ್ಷಣಗಳನ್ನು ತಗ್ಗಿಸುವುದು. ಕುದಿಯುವ ಬಿಸಿ ನೀರಿಗೆ ಅಥವಾ ಹಾಲಿಗೆ ಒಂದು ತುಂಡು ಶುಂಠಿ, ಸ್ವಲ್ಪ ಅರಿಶಿನ ಹಾಕಿಕೊಂಡು ಆ ನೀರನ್ನು ತಣ್ಣಗಾಗಿಸಿ ಸೇವನೆ ಮಾಡಿದರೆ ಅದರಲ್ಲಿ ಇರುವ ಔಷಧೀಯ ಗುಣಗಳು ದೇಹಕ್ಕೆ ಸಿಗುವುದು. ದೇಹದ ಪ್ರಮುಖ ಅಂಗವಾಗಿರುವ ಯಕೃತ್ ನ್ನು ನಿರ್ವಿಷಗೊಳಿಸಲು ಅರಿಶಿನ, ಶುಂಠಿ ಚಾ ಕುಡಿಯಬೇಕು. ಅದರಿಂದ ಸಿಗುವ ಐದು ಲಾಭಗಳನ್ನು ತಿಳಿಯಿರಿ.
ಜೀರ್ಣಕ್ರಿಯೆಗೆ ಲಾಭಕಾರಿ
ಜೀರ್ಣಕ್ರಿಯೆ ಕಿಣ್ವ ಮತ್ತು ವಾಕರಿಕೆಯನ್ನು ಕಡಿಮೆ ಮಾಡುವ ಶುಂಠಿಯು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗುವುದು. ಅರಿಶಿನವು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಣೆ ಮಾಡಿ ಜೀರ್ಣಕ್ರಿಯೆ ಆರೋಗ್ಯಕ್ಕೆ ಲಾಭಕಾರಿ. ಇವೆರಡನ್ನು ಜತೆಯಾಗಿ ಸೇರಿಸಿಕೊಂಡು ಪಾನೀಯವಾಗಿ ಬಳಸಿದರೆ ಆಗ ಇದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುವುದು.
ಉರಿಯೂತ ತಗ್ಗಿಸಲು
ಶುಂಠಿ ಹಾಗೂ ಅರಿಶಿನದಲ್ಲಿ ಪ್ರಬಲ ಉರಿಯೂತ ಶಮನಕಾರಿ ಅಂಶಗಳು ಇದೆ. ಶುಂಠಿಯಲ್ಲಿ ಜಿಂಜರಾಲ್ ಮತ್ತು ಅರಿಶಿನದಲ್ಲಿ ಕರ್ಕ್ಯೂಮಿನ್ ಅಂಶವು ಇದೆ. ಇವೆರಡು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ ಸಂಧಿವಾತದ ಲಕ್ಷಣಗಳನ್ನು ತಗ್ಗಿಸುವುದು ಮತ್ತು ಸಂಪೂರ್ಣ ಆರೋಗ್ಯ ಕಾಪಾಡುವುದು.
ಪ್ರತಿರೋಧಕ ಶಕ್ತಿ ವೃದ್ಧಿ
ದೇಹದಲ್ಲಿ ಪ್ರತಿರೋಧಕ ಶಕ್ತಿಯು ಬಲವಾಗಿದ್ದರೆ, ಆಗ ಯಾವುದೇ ಅನಾರೋಗ್ಯವು ಕಾಡದು. ಶುಂಠಿ ಮತ್ತು ಅರಿಶಿನದಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳು ಆಕ್ಸಿಡೇಟಿವ್ ಒತ್ತಡದಿಂದ ದೇಹವನ್ನು ರಕ್ಷಿಸಲು ಕವಚವಾಗಿ ಕೆಲಸ ಮಾಡುವುದು. ಬೆಳಗ್ಗೆ ಶುಂಠಿ ಮತ್ತು ಅರಿಶಿನ ಹಾಕಿದ ಚಹಾ ಕುಡಿದರೆ, ಆಗ ಇದು ತುಂಬಾ ಲಾಭಕಾರಿ ಆಗಿ ಪರಿಣಮಿಸಲಿದೆ.
ಋತುಚಕ್ರದ ನೋವು ನಿವಾರಣೆ
ಮಹಿಳೆಯರಲ್ಲಿ ಋತುಚಕ್ರದ ಸಂದರ್ಭದಲ್ಲಿ ಹಲವಾರು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಹೊಟ್ಟೆನೋವು, ಸೆಳೆತ, ಬೆನ್ನು ನೋವು ಇತ್ಯಾದಿಗಳು ಇರುವುದು. ಒಂದು ಕಪ್ ಶುಂಠಿ ಮತ್ತು ಅರಿಶಿನ ಹಾಕಿದ ಚಾ ಕುಡಿದರೆ ಆಗ ಇದು ಋತುಚಕ್ರ ಸಂದರ್ಭ ಕಾಡುವ ಸಮಸ್ಯೆಗಳನ್ನು ದೂರ ಮಾಡುವುದು.
ತೂಕ ಇಳಿಸಲು ಸಹಕಾರಿ
ತೂಕ ಇಳಿಸುವುದು ತುಂಬಾ ಕಠಿಣ ಕೆಲಸವೆಂದು ಭಾವಿಸಲಾಗುತ್ತದೆ. ಆದರೆ ಅರಿಶಿನ ಮತ್ತು ಶುಂಠಿ ಚಾ ಕುಡಿದರೆ ಅದು ತೂಕ ಇಳಿಸಲು ನೆರವಾಗುವುದು. ಅರಿಶಿನದಲ್ಲಿ ಕರ್ಕ್ಯೂಮಿನ್ ಎನ್ನುವ ಅಂಶವಿದ್ದು, ಇದು ಚಯಾಪಚಯ ವೃದ್ಧಿ ಮಾಡಿ, ಉರಿಯೂತ ತಗ್ಗಿಸಿ ತೂಕ ಇಳಿಸಲು ಸಹಕಾರಿ. ಶುಂಠಿಯು ಹಸಿವನ್ನು ನಿಯಂತ್ರಣದಲ್ಲಿ ಇಡುವುದು. ಬೆಳಗ್ಗೆ ಇದನ್ನು ಸೇವನೆ ಮಾಡಿದರೆ ಆಗ ಇದರಿಂದ ತೂಕ ಇಳಿಸುವ ಕ್ರಮಕ್ಕೆ ತುಂಬಾ ನೆರವಾಗಲಿದೆ.