ಹಾಲು ತುಂಬಾ ಪೋಷಕಾಂಶಗಳನ್ನು ಒಳಗೊಂಡಿರುವಂತಹ ಪಾನೀಯ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಹಲವಾರು ಬಗೆಯ ಹಾಲುಗಳು ಲಭ್ಯವಿದ್ದು, ಇದರಲ್ಲಿ ದನದ ಹಾಲು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ದನದ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ಪೋಷಣೆ ನೀಡಿ ಬೆಳವಣಿಗೆಗೆ ಸಹಕರಿಸುವುದು.
ಹೀಗಾಗಿ ಬೆಳೆಯುತ್ತಿರುವ ಮಕ್ಕಳ ಆಹಾರ ಕ್ರಮದಲ್ಲಿ ನಿತ್ಯವೂ ಹಾಲನ್ನು ಸೇರಿಸಬೇಕು. ಇದರಿಂದ ಮಕ್ಕಳ ಬೆಳವಣಿಗೆಗೆ ಸರಿಯಾಗಿ ಆಗಲು ಸಾಧ್ಯ. ಹಾಲಿನಲ್ಲಿ ಇರುವ ಕ್ಯಾಲ್ಸಿಯಂ ಅಂಶವು ಮೂಳೆಯನ್ನು ಬಲಪಡಿಸಿ ಬೆಳವಣಿಗೆಗೆ ಸಹಕಾರಿ.
ಹಾಲನ್ನು ವಿವಿಧ ರೀತಿಯಿಂದ ಬಳಕೆ ಮಾಡಬಹುದು. ಅದರ ಹಲವಾರು ರೀತಿಯ ಉಪ ಉತ್ಪನ್ನಗಳು ಕೂಡ ಇವೆ. ಆದರೆ ನಾವು ಹಾಲಿನಿಂದ ಯಾವೆಲ್ಲಾ ಲಾಭಗಳು ಸಿಗುವುದು ಎಂದು ತಿಳಿಯುವ.
ತ್ವಚೆಗೆ
ಹಾಲಿನಲ್ಲಿನ ಇರುವ ಪೋಷಕಾಂಶಗಳು ತ್ವಚೆಗೆ ಕಾಂತಿ ನೀಡುವುದು. ಇದರಲ್ಲಿನ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿನ ಸತ್ತ ಕೋಶಗಳನ್ನು ಕಿತ್ತು ಹಾಕುವುದು ಮತ್ತು ಚರ್ಮವನ್ನು ನಯವಾಗಿಸುವುದು. ಇದರಲ್ಲಿನ ಅಮಿನೋ ಆಮ್ಲಗಳು ಚರ್ಮಕ್ಕೆ ಪೋಷಣೆ ನೀಡುವುದು.
ಮೂಳೆಗಳಿಗೆ
ಹಾಲು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದ್ದು, ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೇವಲ ಬೆಳೆಯುವ ಮಕ್ಕಳಿಗೆ ಮಾತ್ರವಲ್ಲದೆ, ವಯಸ್ಕರಿಗೆ ಕೂಡ ಮೂಳೆಗಳನ್ನು ಬಲಿಷ್ಠವಾಗಿಸಲು ಸಹಕಾರಿ. ಹಾಲು ಹಲ್ಲುಗಳನ್ನು ಬಲಪಡಿಸುವುದು ಮತ್ತು ಇದು ದಂತಕುಳಿಯಿಂದ ರಕ್ಷಣೆ ನೀಡುವುದು.
ತೂಕ ಇಳಿಕೆ
ಕಡಿಮೆ ಕೊಬ್ಬು ಇರುವಂತಹ ಹಾಲನ್ನು ಸೇವನೆ ಮಾಡುವಂತಹ ಮಹಿಳೆಯರು ಹೆಚ್ಚು ತೂಕ ಇಳಿಸುವರು ಎಂದು ಅಧ್ಯಯನಗಳು ಹೇಳಿವೆ. ಇದು ಹಸಿವನ್ನು ಕಡಿಮೆ ಮಾಡುವುದು ಹಾಗೂ ಆರೋಗ್ಯಕಾರಿ ಕೂಡ. ಒಂದು ಲೋಟ ಹಾಲು ಕುಡಿದರೆ ಅದು ಹೊಟ್ಟೆ ತುಂಬುವಂತೆ ಮಾಡುವುದು.
ದೇಹದ ಆರೋಗ್ಯಕ್ಕೆ
ಇದು ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಮತ್ತು ಪಾರ್ಶ್ವವಾಯು ಅಪಾಯವನ್ನು ತಗ್ಗಿಸುವುದು. ಇದು ಯಕೃತ್ ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವುದನ್ನು ಕಡಿಮೆ ಮಾಡುವುದು. ಇದರಲ್ಲಿ ವಿಟಮಿನ್ ಎ ಮತ್ತು ಬಿ ಇದ್ದು, ಕಣ್ಣಿಗೂ ಒಳ್ಳೆಯದು. ಹಾಲಿನಲ್ಲಿ ಕೆಲವೊಂದು ಅಂಶಗಳು ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವುದು.
ಒತ್ತಡ ನಿವಾರಣೆಗೆ
ದಿನದ ಒತ್ತಡವನ್ನು ನಿವಾರಣೆ ಮಾಡಲು ಹಾಲು ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಒಂದು ಲೋಟ ಬಿಸಿ ಹಾಲು ಕುಡಿದರೆ ಅದರಿಂದ ಸ್ನಾಯುಗಳು ಆರಾಮವಾಗುವುದು ಮತ್ತು ಇದು ನರಗಳಿಗೆ ಶಮನ ನೀಡುವುದು.
ಇದು ಋತುಚಕ್ರದ ಸಂದರ್ಭದಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಶಕ್ತಿ ವೃದ್ಧಿಸುವುದು. ಮುಂದಿನ ಸಲ ಋತುಚಕ್ರದ ಸಮಸ್ಯೆಯು ಕಾಡಿದ ವೇಳೆ ಒಂದು ಲೋಟ ಬಿಸಿ ಹಾಲು ಕುಡಿಯಿರಿ.ಹಾಲಿನಲ್ಲಿ ಅಷ್ಟೆಲ್ಲ ಪೌಷ್ಠಿಕಾಂಶವಿದೆ ಎನ್ನುವ ನೀವೇ ಹಾಲು ಕುಡಿಯಬೇಡಿ ಎನ್ನುತ್ತೀರಲ್ಲ ಎನ್ನಬೇಡಿ. ಹಾಲು ಕೆಲವೊಮ್ಮೆ ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಕೆಮ್ಮು , ನೆಗಡಿ, ಚರ್ಮ ಸಂಬಂಧಿ ಸಮಸ್ಯೆ, ತುರಿಕೆ, ತೂಕ ಹೆಚ್ಚಾಗುವುದು, ಮೂಗು, ಕಿವಿ, ಗಂಟಲಿನಲ್ಲಿ ತುರಿಕೆ ಇರುವವರಿಗೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಇವರು ಹಾಲು ಸೇವಿಸಬಾರದು.
ಈ ಸಮಸ್ಯೆಗಳಿಂದ ಬಳಲುತ್ತಿರುವವರು ಬೇಸಿಗೆಯಲ್ಲಿ ರಾತ್ರಿ ಮಲಗುವಾಗ ಮಾತ್ರ ಹಾಲನ್ನು ಕುಡಿಯಬಹುದು. ಉಳಿದ ಸಮಯದಲ್ಲಿ ರಾತ್ರಿ ಹಾಲನ್ನು ತ್ಯಜಿಸಬೇಕು. ಒಣ ಕೆಮ್ಮು ಇದ್ದರೆ ಹಾಲು ಕುಡಿಯಬಹುದು. ಕಫದಿಂದ ಕೂಡಿದ ಕೆಮ್ಮಿದ್ದರೆ ಹಾಲು ಕುಡಿಯಬಾರದು. ನೀವು ತಿನ್ನುವ ಆಹಾರ ಹಾಗೂ ಹಾಲು ಎರಡಕ್ಕೂ ಸಂಬಂಧವಿದೆ. ರಾತ್ರಿ ತಡವಾಗಿ ಆಹಾರ ಸೇವನೆ ಮಾಡಿದ್ದರೆ ತಕ್ಷಣ ಮಲಗಲು ಹೋಗ್ತಿದ್ದರೆ ಆಗ ಹಾಲನ್ನು ಕುಡಿಯಬಾರದು. ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.
ಹಸು ವಿನ ಹಾಲನ್ನು ಅನೇಕಾನೇಕ ವರ್ಷಗಳಿಂದ ಸೇವಿಸುತ್ತ ಬರಲಾಗಿದೆ. ಹಸುವಿನ ಹಾಲು ಶ್ರೇಷ್ಠ ಎನ್ನಲಾಗುತ್ತದೆ. ದೇಹದಲ್ಲಿ ಉಷ್ಣತೆ ಸಮಸ್ಯೆ ಎದುರಿಸುವವರು, ಹೊಟ್ಟೆಯಲ್ಲಿ ಉರಿ ಇರುವವರು, ಹೆಚ್ಚು ದೈಹಿಕ ಕೆಲಸ ಮಾಡುವವರು ಹಾಲು ಸೇವಿಸಬೇಕು. ಹೊಟ್ಟೆ ಯಲ್ಲಿ ಉರಿ ಉರಿಯ ಅನುಭವವಾಗ್ತಿದ್ದರೆ ಹಾಲು ಕುಡಿಯುವುದು ಉತ್ತಮ.
ಹಸಿವಾದಾಗ ಹಾಲು ಕುಡಿಯಬಹುದು. ಏಕೆಂದರೆ ಹಾಲು ಸಂಪೂರ್ಣ ಆಹಾರ ವಾಗಿದೆ. ಆಹಾರವನ್ನು ಸೇವಿಸಿದ ನಂತರ ಹಾಲು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಹಾಲು ಸರಿಯಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣವಾಗದೇ ಇದ್ದಾಗ ಅಜೀರ್ಣ ಸಮಸ್ಯೆ ಶುರುವಾಗುತ್ತದೆ. ಜೊತೆಗೆ ನೆಗಡಿ, ಕೆಮ್ಮು, ಭೇದಿ, ವಾಂತಿ, ಜ್ವರ ಬರುತ್ತದೆ. ಜೀರ್ಣವಾಗದ ವಸ್ತುಗಳನ್ನು ಹೊರ ಹಾಕಲು ದೇಹವು ಬೇರೆ ಬೇರೆ ಮಾರ್ಗವನ್ನು ಹುಡುಕುತ್ತದೆ.
ಕೆಲವರಿಗೆ ಹಾಲು ಜೀರ್ಣವಾಗುವುದಿಲ್ಲ. ಅಂತವರು ಹಾಲಿಗೆ ಸ್ವಲ್ಪ ಒಣ ಶುಂಠಿ ಪುಡಿಯನ್ನು ಸೇರಿಸಿ ಕುದಿಸಿ ನಂತರ ಕುಡಿಯಬೇಕು. ಆಹಾರದ ಜೊತೆಗೆ ಎಂದೂ ಹಾಲು ಸೇವನೆ ಮಾಡಬೇಡಿ. ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹುಳಿ, ಖಾರ ಪದಾರ್ಥಗಳನ್ನು ಹಾಲಿನೊಂದಿಗೆ ಎಂದಿಗೂ ಸೇವಿಸಬಾರದು.