ಮುಖದ ಸೌಂದರ್ಯಕ್ಕೆ ಇನ್ನೊಂದು ಮುಖ್ಯವಾದ ಅಂಶ ಸಹಾಯಕ್ಕೆ ಬರುವುದು ಎಂದರೆ ದಿನದಲ್ಲಿ ಎಷ್ಟು ಬಾರಿ ಮುಖದ ಭಾಗದ ಸ್ವಚ್ಛತೆಗೆ ನಾವು ಒತ್ತು ಕೊಡುತ್ತೇವೆ ಎಂಬುದು.ನಮ್ಮ ಮುಖ ನಮ್ಮ ಸೌಂದರ್ಯದ ಕೈಗನ್ನಡಿ. ಮನಸ್ಸಿನ ಹಾವಭಾವಗಳು ಮುಖದ ಮೇಲೆ ಎದ್ದು ಕಾಣುತ್ತವೆ. ಒಬ್ಬ ವ್ಯಕ್ತಿಯ ಮುಖವನ್ನು ಸೂಕ್ಷ್ಮವಾಗಿ ನೋಡಿ ಆತನ ಹಿನ್ನೆಲೆಯನ್ನು ಸುಲಭವಾಗಿ ಹೇಳಿ ಬಿಡುವಂತಹ ಕಾಲ ಬಂದಿದೆ.
ಜೀವನದಲ್ಲಿ ಕಷ್ಟ ಗಳಿಲ್ಲದೆ, ಯಾವುದೇ ಕೆಟ್ಟ ಆಲೋಚನೆಗಳಿಲ್ಲದೆ ಸಂತೋಷವಾಗಿರುವವರ ಮುಖ ನೋಡಲು ಅರಳಿದ ಮಲ್ಲಿಗೆಯಂತೆ ಸದಾ ನಗು ನಗುತ್ತಿರುತ್ತದೆ. ಮುಖದ ಹೊಳಪು ಮತ್ತು ಸೌಂದರ್ಯಕ್ಕೆ ನಮ್ಮ ಆಹಾರ ಪದ್ಧತಿಯೂ ಕಾರಣವಾಗುತ್ತದೆ ಎಂದು ಹಲವರು ಹೇಳುತ್ತಾರೆ.
ವೈಜ್ಞಾನಿಕವಾಗಿ ಇದು ಸಾಬೀತಾಗಿದೆ ಕೂಡ. ಸಾಧ್ಯವಾದಷ್ಟು ಹೆಚ್ಚಿನ ನೀರಿನ ಅಂಶ, ನಾರಿನ ಅಂಶ, ಪೌಷ್ಟಿಕ ಅಂಶ ಇರುವ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ನಮ್ಮ ಇಡೀ ದೇಹದ ಚರ್ಮ ತನ್ನ ಸೌಂದರ್ಯವನ್ನು ಕಾಪಾಡಿ ಕೊಳ್ಳುವುದು ಮಾತ್ರವಲ್ಲದೆ ಆರೋಗ್ಯಕರವಾಗಿ ಕೂಡ ಇರುತ್ತದೆ. ಈ ವಿಚಾರ ನಮ್ಮ ಮುಖಕ್ಕೂ ಅನ್ವಯಿಸುತ್ತದೆ.
ಮುಖದ ಸೌಂದರ್ಯಕ್ಕೆ ಇನ್ನೊಂದು ಮುಖ್ಯವಾದ ಅಂಶ ಸಹಾಯಕ್ಕೆ ಬರುವುದು ಎಂದರೆ ದಿನದಲ್ಲಿ ಎಷ್ಟು ಬಾರಿ ಮುಖದ ಭಾಗದ ಸ್ವಚ್ಛತೆಗೆ ನಾವು ಒತ್ತು ಕೊಡುತ್ತೇವೆ ಎಂಬುದು. ಒಣ ಚರ್ಮ ಹೊಂದಿರುವವರಿಗಿಂತ ಎಣ್ಣೆ ಚರ್ಮ ಹೊಂದಿರುವವರು ಒಂದು ದಿನಕ್ಕೆ ಎರಡು ಬಾರಿ ಮುಖ ತೊಳೆದರೆ ಸಾಮಾನ್ಯವಾಗಿ ಮುಖದ ಸೌಂದರ್ಯ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
ಎರಡಕ್ಕಿಂತ ಹೆಚ್ಚು ಬಾರಿ ಮುಖ ತೊಳೆದರೆ ಚರ್ಮಕ್ಕೆ ಖಂಡಿತವಾಗಿ ಹಾನಿಯಾಗುತ್ತದೆ ಎಂದು ಸೌಂದರ್ಯ ತಜ್ಞರು ಎಚ್ಚರಿಕೆ ಕೊಡುತ್ತಾರೆ. ಒಣ ಚರ್ಮ ಹೊಂದಿರುವವರು ಪ್ರತಿ ದಿನ ಒಂದು ಬಾರಿ ಮುಖ ತೊಳೆದರೆ ಸಾಕಾಗುತ್ತದೆ. ಹಾಗಾದರೆ ನಮ್ಮ ಮುಖ ನಾವು ತೊಳೆದುಕೊಳ್ಳಲು ನೀತಿ ನಿಯಮಗಳಿವೆಯೇ ಎಂದು ನೀವು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿರಬಹುದು. ಖಂಡಿತ ಇದೆ. ಬೇಸಿಗೆ ಕಾಲದಲ್ಲಿ, ಮಳೆಗಾಲದಲ್ಲಿ, ಚಳಿಗಾಲದಲ್ಲಿ ಮುಖ ತೊಳೆಯುವ ಪ್ರಕ್ರಿಯೆ ಬದಲಾಗಲೇಬೇಕಾಗುತ್ತದೆ.
ಬೆಳಗಿನ ಸಮಯದಲ್ಲಿ ಮುಖ ತೊಳೆಯುವುದರಿಂದ
ಬೆಳಗ್ಗೆ ಹಾಸಿಗೆಯಿಂದ ಎದ್ದ ಮೇಲೆ ಯಾವುದೇ ಆಹಾರವನ್ನು ಸೇವಿಸುವ ಮೊದಲು ಹಲ್ಲುಜ್ಜಿ ಸ್ವಚ್ಛವಾದ ನೀರಿನಿಂದ ಮೊದಲು ಮುಖ ತೊಳೆದುಕೊಳ್ಳಬೇಕು. ನಿಮ್ಮ ಬಳಿ ಫೇಸ್ ವಾಶ್ ಇದ್ದರೆ ಇನ್ನೂ ಉತ್ತಮ.
ಎದ್ದ ತಕ್ಷಣ ಮುಖ ತೊಳೆದುಕೊಂಡು ಕನ್ನಡಿ ಮುಂದೆ ನಿಂತು ನೋಡುವುದರಿಂದ ಸಾಕಷ್ಟು ತಾಜಾತನ ನಿಮ್ಮನ್ನು ಆವರಿಸುತ್ತದೆ. ಜೊತೆಗೆ ನಿಮ್ಮ ಮುಖದ ಭಾಗದಲ್ಲಿ ಸಣ್ಣ ಸಣ್ಣ ರಂಧ್ರಗಳಲ್ಲಿರುವ ಧೂಳು ಮತ್ತು ಕೊಳಕಿನ ಅಂಶ ಅದಾಗಲೇ ನಿವಾರಣೆ ಆಗಿರುತ್ತದೆ.
ಮಧ್ಯಾಹ್ನದ ಸಮಯದಲ್ಲಿ ಮುಖ ತೊಳೆಯುವುದರಿಂದ
ಒಂದು ವೇಳೆ ನಿಮಗೆ ಎಣ್ಣೆ ಚರ್ಮವಿದ್ದರೆ ನಿಮ್ಮ ಚರ್ಮ ರೋಗ ತಜ್ಞರನ್ನು ಯಾವ ಬಗೆಯ ಸೋಪು ಅಥವಾ ಫೇಸ್ ವಾಶ್ ಬಳಸಿದರೆ ನಿಮ್ಮ ಚರ್ಮಕ್ಕೆ ಸೂಕ್ತವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಬೇಕೆಂದರೆ ಮಧ್ಯಾಹ್ನದ ಸಮಯದಲ್ಲಿ ತಂಪಾದ ನೀರಿನಿಂದ ಮುಖ ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಮಧ್ಯಾಹ್ನದ ಸಮಯದಲ್ಲಿ ಮುಖ ತೊಳೆಯುವುದರಿಂದ ಮುಖದ ಮೇಲಿನ ಸಾಕಷ್ಟು ಎಣ್ಣೆಯ ಅಂಶ ಇಲ್ಲವಾಗುತ್ತದೆ ಮತ್ತು ಬೆಳಗಿನಿಂದ ಯಾವುದಾದರೂ ಕೆಲಸದಲ್ಲಿ ನಿರತವಾಗಿದ್ದ ನಿಮಗೆ ಸಾಕಷ್ಟು ವಿಶ್ರಾಂತಿ ಲಭಿಸಿ ತಾಜಾತನ ಸಿಗುತ್ತದೆ.
ಸಂಜೆಯ ಸಮಯದಲ್ಲಿ ಮುಖ ತೊಳೆಯುವುದರಿಂದ
ಸಾಧಾರಣವಾಗಿ ಎಲ್ಲರೂ ಮನೆಯ ಹೊರಗಡೆ ದುಡಿಯಲು ಹೋದವರು ಮನೆಗೆ ಬಂದ ತಕ್ಷಣ ಮುಖ ತೊಳೆದು ಪ್ರಶ್ ಆಗುತ್ತಾರೆ. ಆದರೆ ಕೊರೋನಾ ಇರುವ ಈ ಸಂದರ್ಭದಲ್ಲಿ ಮನೆಗೆ ಬಂದು ಕೇವಲ ಮುಖ ತೊಳೆದುಕೊಳ್ಳುವ ಬದಲು ಸ್ನಾನ ಮಾಡಿದರೆ ಉತ್ತಮ.
ಕೆಲಸಕ್ಕೆ ಹೋಗುವವರು ಮಾತ್ರವಲ್ಲದೆ, ಮನೆಯ ಯಾರೇ ಸದಸ್ಯರು ಮನೆಯ ಹೊರಗಡೆ ಯಾವುದೇ ಕೆಲಸಕ್ಕೆ ಹೋಗಿ ಬಂದರೂ ಸ್ನಾನ ಮಾಡಲೇಬೇಕು. ನಿಮ್ಮ ಆಯಾಸ ದೂರವಾಗುವುದರ ಜೊತೆಗೆ ನಿಮ್ಮ ಮುಖದ ಮೇಲಿನ ಸಾಕಷ್ಟು ಕೊಳಕಿನ ಅಂಶ ಇದರಿಂದ ನಿವಾರಣೆಯಾಗುತ್ತದೆ.
ಬೇಸಿಗೆ ಸಂದರ್ಭದಲ್ಲಿ ಗಿಡಮೂಲಿಕೆಗಳ ಫೇಸ್ ಪ್ಯಾಕ್ ಬಳಸಬಹುದು. ಮುಖದ ಸೌಂದರ್ಯವನ್ನು ಹೆಚ್ಚಿಸಿ ಸ್ಪಷ್ಟವಾದ ಅಂದ ನಿಮ್ಮದಾಗಬೇಕಾದರೆ ಈ ಕೆಳಗಿನ ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ಮಾಡಿ ನೋಡಿ. ಪ್ರತಿ ಬಾರಿ ಮುಖ ತೊಳೆದಾಗಲೆಲ್ಲಾ ಫೇಸ್ ವಾಶ್ ಬಳಸಲೇಬೇಕು ಎಂದೇನಿಲ್ಲ ಮತ್ತು ಇದು ನಿಮ್ಮ ಮುಖದ ಚರ್ಮದ ಭಾಗಕ್ಕೆ ಹಾನಿಕರ ಕೂಡ.
ಇದರಲ್ಲಿರುವ ರಾಸಾಯನಿಕ ಅಂಶಗಳು ದಿನ ಕಳೆದಂತೆ ನಿಮ್ಮ ಮುಖದ ಮೃದುತ್ವವನ್ನು ಮತ್ತು ನೈಸರ್ಗಿಕ ಹೊಳಪನ್ನು ಇಲ್ಲವಾಗಿಸಿ ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ದಿನಕ್ಕೆ ಒಂದು ಬಾರಿ ಫೇಸ್ ವಾಶ್ ಬಳಸಿ. ಬೇರೆ ಸಮಯದಲ್ಲಿ ತಂಪಾದ ಶುಚಿಯಾದ ನೀರಿನಿಂದ ಮುಖ ತೊಳೆದುಕೊಳ್ಳಿ
ನಿಮ್ಮ ಮುಖ ಸಾಕಷ್ಟು ಎಣ್ಣೆಯ ಅಂಶದಿಂದ ಕೂಡಿದ್ದರೆ, ನೀವು ಫೇಸ್ ವಾಶ್ ಬಳಸಿದ ಸಮಯದಲ್ಲಿ ಫೇಸ್ ಟೋನರ್ ಬಳಸಿ. ಇಲ್ಲೂ ಸಹ ಸ್ವಚ್ಛವಾದ ಶುದ್ಧವಾದ ನೀರಿನಿಂದ ಮುಖ ತೊಳೆದುಕೊಂಡರೆ ಸಾಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿಮ್ಮ ಚರ್ಮ ಸಾಕಷ್ಟು ಸೂಕ್ಷ್ಮವಾಗಿದ್ದರೆ, ನಿಮ್ಮ ಮನೆಯ ಬೇಬಿ ಸೋಪ್ ಬಳಸಿ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬಹುದು.
ಯಾವುದೇ ಕಾರಣಕ್ಕೂ ತುಂಬಾ ಹೊತ್ತು ಮುಖ ತೊಳೆಯುವ ಸಮಯದಲ್ಲಿ ನಿಮ್ಮ ಮುಖವನ್ನು ಉಜ್ಜುತ್ತಾ ಕೂರಬೇಡಿ. ಇದು ಸಾಮಾನ್ಯವಾಗಿ ನಿಮ್ಮ ಮುಖದ ಭಾಗದ ಚರ್ಮದ ಕೋಶಗಳನ್ನು ಹಾನಿ ಮಾಡುತ್ತದೆ ಎಂದು ಹೇಳುತ್ತಾರೆ. ಇದರಿಂದ ನಿಮ್ಮ ಸೌಂದರ್ಯ ಹದಗೆಡುವುದು ಸಹಜ.