ಅತ್ತಿ ಹಣ್ಣು ನೋಡಲು ಬಲು ಸೊಗಸು. ಆದರೆ ಅದನ್ನು ತಿನ್ನಲಿಕ್ಕಾಗುವುದಿಲ್ಲ ಎನ್ನಬೇಡಿ.ಏಕೆಂದರೆ ಅದು ನಿಮ್ಮ ಮನಸ್ಸಿಗೂ, ದೇಹಕ್ಕೂ ಆರಾಮ. ಕೇವಲ ಅತ್ತಿ ಹಣ್ಣು ಅಂತಲ್ಲ, ನಟ್ಸ್, ಸೋಯಾಬೀನ್, ಸೇಬು, ಲಿಂಬೆ, ಪೀಚ್ಹಣ್ಣು, ಇಡೀಯ ಧಾನ್ಯಗಳು, ಕಂದು ಅಕ್ಕಿ, ಸೂರ್ಯಕಾಂತಿ ಬೀಜ, ಎಳ್ಳು ಇವುಗಳಲ್ಲಿ ಉತ್ತಮ ಮೆಗ್ನೀಷಿಯಂ ಅಂಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮದ್ಯಪಾನ, ಸಕ್ಕರೆ ಕಾಯಿಲೆ, ಕರುಳಿನಲ್ಲಿ ಆಹಾರಗಳ ಹೀರುವಿಕೆಯಲ್ಲಿ ವ್ಯತ್ಯಾಸ, ಮೂತ್ರಜನಾಂಗದ ತೊಂದರೆ ಇರುವವರಲ್ಲಿ ಮೆಗ್ನೀಷಿಯಂ ಕೊರತೆ ಕಂಡು ಬರುತ್ತದೆ. ಆದ್ದರಿಂದ ತಜ್ಞರ ಮೂಲಕ ಸಲಹೆ ಪಡೆದು ಆ ಪ್ರಕಾರ, ಆಹಾರ ಸೇವಿಸುವುದು ಉತ್ತಮ.
ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ಗಳು, ಖನಿಜಾಂಶಗಳು, ಪ್ರೋಟಿನ್ಗಳ ಮೂಲಾಧಾರವಾದ ಅಮೈನೋ ಆ್ಯಸಿಡ್ ಇನ್ನು ಅನೇಕ ಪೋಷಕಾಂಶಗಳು ಅಡಗಿರುತ್ತವೆ. ಈ ಅಗತ್ಯ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡಿ ಜೊತೆಗೆ ರೋಗಗಳು ಬಾರದಂತೆ ತಡೆಯುತ್ತದೆ. ಸಾಮಾನ್ಯವಾಗಿ ವಿಟಮಿನ್ ಎ, ಸಿ, ಡಿ, ಕ್ಯಾಲ್ಷಿಯಂ ಹಾಗೂ ಕಬ್ಬಿಣದ ಕೊರತೆಯನ್ನು ಬೇಗ ಗುರುತಿಸಬಹುದು. ಆದರೆ ಮೆಗ್ನೀಷಿಯಂ ಕೊರತೆಯನ್ನು ಹಾಗೂ ದೇಹದಲ್ಲಿ ಮೆಗ್ನೀಷಿಯಂ ಕೊರತೆಯಿಂದ ಆಗುವ ಬದಲಾವಣೆಗಳನ್ನು ಗಮನಿಸುವುದಿಲ್ಲ.
ಮೆಗ್ನೀಷಿಯಂ ಹಗುರವಾದ, ಬೆಳ್ಳಿ ಬಣ್ಣದ ಸುಲಭವಾಗಿ ಒಗ್ಗಿಸಲ್ಪಡುವ ಲೋಹ ರೂಪದ ಮೂಲವಸ್ತು. ಇದು ತಂಪಾದ ಕ್ಷಾರೀಯ ನಿದ್ರೆ ತರಿಸುವ ಖನಿಜಾಂಶ. ಬೇಸಿಗೆಯ ಬಿಸಿಲಲ್ಲಿ ಇದು ದೇಹವನ್ನು ತಂಪಾಗಿ ಇರಿಸುತ್ತದೆ. ಮೂಳೆಗಳಲ್ಲಿ ಇದರ ಸಂಗ್ರಹ ಹೆಚ್ಚು. ಆಹಾರದಲ್ಲಿ ಮೆಗ್ನೀಷಿಯಂನ ಹೆಚ್ಚಿನ ಭಾಗ ಕರುಳಿನಿಂದ ಹೀರಲ್ಪಡದೆ ಇರುವುದರಿಂದ ಇದು ದೇಹದಿಂದ ಹೊರ ಹೋಗಿ ಬಿಡುತ್ತದೆ. ಮೆಗ್ನೀಷಿಯಂನಿಂದ ದೇಹದ ನರಗಳಿಗೆ ಆರಾಮ ನೀಡುತ್ತದೆ.
ಸ್ನಾಯುಗಳು ಕೆಲಸ ಮಾಡಲು ಸಹಾಯ ಮಾಡುತ್ತದೆ. ಕ್ಯಾಲ್ಷಿಯಂ ಹಾಗೂ ರಂಜಕ ಸರಿಯಾಗಿ ಕೆಲಸ ಮಾಡಲು ಬೇಕಾಗುವ ಕಿಣ್ವಗಳಿಗೆ ಮೆಗ್ನೀಷಿಯಂ ಅಗತ್ಯ. ಬಿ ವಿಟಮಿನ್ಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಇದು ಅವಶ್ಯಕ. ನರಗಳು ಹಾಗೂ ಸ್ನಾಯುಗಳ ಕ್ರಿಯೆ ಸುಸೂತ್ರವಾಗಿ ನಡೆಯಲು ಕೂಡ ಇದು ಬೇಕು. ಅದಕ್ಕಾಗಿಯೇ ಮೆಗ್ನೀಷಿಯಂ ಕೊರತೆ ಇದ್ದಲ್ಲಿ ಸ್ನಾಯುಗಳು ಸೆಳೆತ ಕಾಣಿಸಿಕೊಳ್ಳುತ್ತದೆ. ಇನ್ನು ಮುಖ್ಯವಾಗಿ ಹೃದಯ ಕ್ರಿಯೆಯನ್ನು ನಿರ್ವಹಿಸಲು ಸಹಾಯ ಮಾಡುವುದರ ಮೂಲಕ ಮೆಗ್ನೀಷಿಯಂ ಹೃದಯಾಘಾತವನ್ನು ತಪ್ಪಿಸುತ್ತದೆ..