ಒಡೆದ ವಸ್ತುಗಳನ್ನು ಬಳಸಬಹುದಾ?

ಮನೆಯನ್ನು ಅಲಂಕರಿಸಿ ಚಂದಕಾಣುವಂತೆ ಮಾಡಬೇಕೆಂದು ಎಲ್ಲರೂ ಆಶಿಸುತ್ತಾರೆ. ಅಲಂಕರಿಸುವ ಗಡಿಬಿಡಿಯಲ್ಲಿ ವಾಸ್ತುದೋಷಕ್ಕೆ ಕಾರಣವಾಗುವ, ಮನೆಗೆ ದೌರ್ಭಾಗ್ಯವನ್ನು ಉಂಟುಮಾಡುವ ವಸ್ತುಗಳನ್ನು ಮನೆಗೆ ತರದೆ ಇರುವಂತೆ ಗಮನಹರಿಸುವುದು ಉತ್ತಮ. ನಕಾರಾತ್ಮಕ ಶಕ್ತಿ ಹೆಚ್ಚಿಸುವ ಮನೆಯಲ್ಲಿರುವ ಅಥವಾ ಮನೆಗೆ ತರುವ ಹೊಸ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

ನೆಮ್ಮದಿ ನೀಡುವ ಸ್ಥಳಗಳನ್ನು ಹೇಳುವುದಾದರೆ ಮನೆಯೇ ಮೊದಲನೆ ಸ್ಥಾನದಲ್ಲಿರುತ್ತದೆ. ಮನೆಯ ಸ್ವಚ್ಛತೆ, ಅಲಂಕಾರ, ಅಂದ-ಚಂದದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಮನೆಯ ಯಾವ ಕೋಣೆ ಹೇಗಿದ್ದರೆ ಚಂದ, ಮನೆಯಲ್ಲಿ ಯಾವ ತರಹದ ಸುಂದರ ವಸ್ತುಗಳನ್ನಿಟ್ಟರೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ ಎಂಬ ಬಗ್ಗೆ ಹಲವಾರು ಬಾರಿ ಚಿಂತಿಸಿರುತ್ತೇವೆ. ಅಲಂಕಾರಿಕ ವಸ್ತುಗಳ ಬಗ್ಗೆ ತಿಳಿಯದೇ ನೋಡಲು ಚಂದವೆನಿಸಿದ ವಸ್ತುಗಳನ್ನೆಲ್ಲ ಮನೆಯಲ್ಲಿಟ್ಟು ಮನೆಯ ಅಂದವನ್ನು ಹೆಚ್ಚಿಸಿರುವ ಬಗ್ಗೆ ಬೀಗುತ್ತೇವೆ. ಕೆಲವು ಬಾರಿ ಅಂತಹ ಅಲಂಕಾರಿಕ ವಸ್ತುಗಳು ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ.ಈ ರೀತಿಯ ಕೆಲವು ವಸ್ತುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿ ಹಲವಾರು ತೊಂದರೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.

ಕಪ್ಪು ಬಾಗಿಲು–ಆಕರ್ಷಕವಾಗಿರಲಿ,ಹೆಚ್ಚು ಬೆಲೆಯದ್ದು ಎಂದು ಮನೆಗೆ ಕಪ್ಪು ಬಾಗಿಲನ್ನು ಹಾಕಿಸಿದರೆ, ಅದು ತೊಂದರೆಯನ್ನು ತಂದು ಮನೆಯಲ್ಲಿ ಇಟ್ಟಂತೆ. ಕಪ್ಪು ವರ್ಣದ ಬಾಗಿಲು ನಕಾರಾತ್ಮಕ ಮತ್ತು ಕೆಟ್ಟ ಶಕ್ತಿಯನ್ನು ಬೇಗ ಆಕರ್ಷಿಸುತ್ತದೆ. ಯಾವ ಮನೆಯಲ್ಲಿ ಕಪ್ಪು ಬಾಗಿಲು ಇದೇಯೋ ಆ ಮನೆಯಲ್ಲಿ ಏನಾದರೊಂದು ಅಶುಭ ಘಟನೆ ನಡೆಯುತ್ತಲೇ ಇರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲ. ಹಣ ಉಳಿಯುವುದಿಲ್ಲ ಮುಂತಾದ ಹಲವು ಸಮಸ್ಯೆಗಳು ಕಾಡುತ್ತವೆ. 

ತಾಜ್ ಮಹಲ್ ಇದ್ದರೆ ಸ್ವಲ್ಪ ನೋಡಿ–ತಾಜ್‌ಮಹಲ್ ಪ್ರೇಮ ಮತ್ತು ಸೌಂದರ್ಯದ ಸಂಕೇತ. ಒಂದು ಅದ್ಭುತ ಕಾಲಾಕೃತಿಯೂ ಹೌದು. ತಾಜ್‌ಮಹಲ್ ಚಿತ್ರ ಇಲ್ಲವೇ ಮೂರ್ತಿಯನ್ನು  ಮನೆಯ ಅಲಂಕಾರಕ್ಕೆಂದು ಕೆಲವರು ತಂದಿಟ್ಟರೆ, ಇನ್ನು ಕೆಲವರು ಪ್ರಿಯಕರ ಅಥವಾ ಪ್ರೇಯಸಿಗೆ ಉಡುಗೊರೆಯಾಗಿ ನೀಡುತ್ತಾರೆ. ಆದರೆ ಇದು ಒಳ್ಳೆಯದಲ್ಲ, ಮಮ್ತಾಜ್ ಮತ್ತು ಶಹಾಜಹಾನ್ ಸಮಾಧಿ ಇದಾಗಿದೆ. ಇದರ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯ ಜೊತೆಗೆ ದೌರ್ಭಾಗ್ಯವನ್ನು ಹತ್ತಿರ ಕರೆದಂತೆ. ಉಡುಗೊರೆಯನ್ನು ನೀಡುವಾಗಲೂ ತಾಜ್‌ಮಹಲ್ ಚಿತ್ರವನ್ನು ನೀಡದಿರುವುದು ಉತ್ತಮ.

ಮೆಟ್ಟಿಲಿನ ಕೆಳಗೆ ಪೂಜಾಗೃಹ ಇರಬಾರದು –ಮನೆಯನ್ನು ಆಕರ್ಷಕವಾಗಿ ನಿರ್ಮಿಸುವ ಮತ್ತು ಜಾಗವನ್ನು ನಿರ್ವಹಣೆ ಮಾಡುವ ಭರದಲ್ಲಿ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಪೂಜಾಗೃಹವನ್ನು ಕೆಳಗೆ ನಿರ್ಮಿಸಿ, ಅದರ ಪಕ್ಕದಲ್ಲೇ ಮೆತ್ತು ಹತ್ತುವ ಮೆಟ್ಟಿಲುಗಳನ್ನು ಇಡಲಾಗುತ್ತದೆ. ಇದು ದೇವರ ಮೇಲೆಯೇ ಕಾಲಿಟ್ಟು ನಡೆದಂತೆ ಆಗುತ್ತದೆ. ಮಂದಿರದ ಶಿಖರದ ಮೇಲೆ ಕಾಲಿಡುವುದು ಪಾಪ ಮಾಡಿದಂತೆ. ಮೆಟ್ಟಿಲುಗಳ ಕೆಳಗೆ ಪೂಜಾಮಂದಿರವನ್ನು ನಿರ್ಮಿಸಬಾರದು.

ಒಡೆದ ಕನ್ನಡಿ–ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡುವುದು, ಜಗಳ, ಮನಸ್ತಾಪಗಳಾಗುವ  ಸಾಧ್ಯತೆ ಇರುತ್ತದೆ.

ಮುರಿದ ಮಂಚ—ಮುರಿದ ಮಂಚವನ್ನು ಉಪಯೋಗಿಸುವುದರಿಂದ ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗುತ್ತದೆ.

ಒಡೆದ ಪಾತ್ರೆ—ಮುರಿದ, ಒಡೆದ ಪಾತ್ರೆಗಳನ್ನು ಅಡುಗೆ ಮನೆಯಿಂದ ಆಚೆ ಇಡುತ್ತೇವೆ, ಮನೆಯಿಂದಲ್ಲ. ಅದು ಬೇರೆ ಏನಾದರೂ ಉಪಯೋಗಕ್ಕೆ ಬರಬಹುದೆಂದು ಎತ್ತಿಡುತ್ತೇವೆ. ಇದು ಒಳ್ಳೆಯದಲ್ಲ, ಇದರಿಂದ ನಕಾರಾತ್ಮಕತೆಯು ಹೆಚ್ಚುವುದಲ್ಲದೇ, ವಾಸ್ತುದೋಷಕ್ಕೂ ಕಾರಣವಾಗುತ್ತದೆ.

ಹಾಳಾದ ಎಲೆಕ್ಟ್ರಾನಿಕ್ ಉಪಕರಣಗಳು–ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾದರೆ ತೀರಾ ಉಪಯೋಗಕ್ಕೆ ಬೇಕೆಂದರೆ ಮಾತ್ರ ತಕ್ಷಣ ಸರಿಮಾಡಿಸುತ್ತೇವೆ. ಕೆಲವು ದಿನ ಹಾಗೇ ಇದ್ದರೂ ನಡೆಯುತ್ತದೆ ಅಂದಾಗ ಅದು ಮನೆಯ ಒಂದು ಮೂಲೆ ಸೇರುತ್ತದೆ. ಕೆಲವು ತಿಂಗಳುಗಳಾದರೂ ಅದನ್ನು ಸರಿಮಾಡಿಸುವ ಗೋಜಿಗೇ ಹೋಗದೇ ಆ ವಿಷಯವನ್ನೇ ಮರೆತು ಬಿಟ್ಟಿರುತ್ತೇವೆ. ಹೆಚ್ಚು ಸಮಯದ ವರೆಗೆ ಸರಿಯಿಲ್ಲದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮನೆಯಲ್ಲಿಟ್ಟು ಕೊಳ್ಳುವುದು ಅಶುಭವೆಂದು ಹೇಳುತ್ತಾರೆ. ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಮನೆಯ ನೆಮ್ಮದಿಯನ್ನು ಹಾಳುಮಾಡುತ್ತದೆ. ಮನೆಯಲ್ಲಿ ಒಡೆದ ಮೂರ್ತಿ, ಹರಿದ ಭಾವಚಿತ್ರವನ್ನು ಇಡುವುದು ವಾಸ್ತುದೋಷಕ್ಕೆ ಕಾರಣವಾಗುತ್ತದೆ.

Leave a Comment