ಶನಿದೇವನನ್ನು ಕರ್ಮದ ದೇವ ,ನ್ಯಾಯದ ದೇವ ಎಂದು ಕರೆಯಲಾಗುತ್ತದೆ. ನಮ್ಮ ಕರ್ಮಗಳಿಗೆ ಅನುಗುಣವಾಗಿ ಶನಿದೇವನು ಫಲವನ್ನು ನೀಡುತ್ತಾನೆ. ಅದೇ ರೀತಿ ಶನಿದೇವನು ಕನಸಿನಲ್ಲಿ ಕಾಣಿಸಿಕೊಂಡರೆ ಅದರ ಅರ್ಥ ಏನು ಹಾಗೂ ಶನಿದೇವನು ಕನಸಿನಲ್ಲಿ ಕಂಡರೆ ಶುಭವೋ ಅಥವಾ ಅಶುಭಫಲವನ್ನು ನೀಡುತ್ತಾನೆಯೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ವ್ಯಕ್ತಿಯ ಭವಿಷ್ಯಕ್ಕೆ ಸಂಬಂಧಪಟ್ಟ ಸಂಕೇತಗಳನ್ನು ನೀಡುತ್ತದೆ. ಕನಸುಗಳು ಮನಸ್ಸಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿರುತ್ತದೆ. ಪ್ರತಿಯೊಂದು ಕನಸಿಗೂ ವಿಭಿನ್ನವಾದ ರೀತಿಯ ಅರ್ಥಗಳಿವೆ, ಅದರಲ್ಲೂ ಒಬ್ಬ ವ್ಯಕ್ತಿಯು ಕನಸಿನಲ್ಲಿ ಶನಿದೇವನ ಚಿತ್ರವನ್ನು ನೋಡಿದರೆ ಶೀಘ್ರದಲ್ಲಿ ಆ ವ್ಯಕ್ತಿಯು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತಾನೆ. ಅಷ್ಟೇ ಅಲ್ಲದೆ ಹೊಸ ಉದ್ಯೋಗವು ಕೂಡ ಆ ವ್ಯಕ್ತಿಗೆ ದೊರೆಯುತ್ತದೆ.
ಕನಸಿನಲ್ಲಿ ಶನಿದೇವನ ಚಿತ್ರಪಟವನ್ನು ನೋಡಿದರೆ ಮನೆಗೆ ಅತಿಥಿಗಳು ಆಗಮಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಕನಸಿನಲ್ಲಿ ಶನಿದೇವನು ಆಶೀರ್ವಾದವನ್ನು ನೀಡುವುದನ್ನು ನೀವು ನೋಡಿದರೆ ನಿಮ್ಮ ಎಲ್ಲ ತೊಂದರೆಗಳು ಕೊನೆಯಾಗುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಇಷ್ಟೇ ಅಲ್ಲದೆ ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯೂ ಇರುತ್ತದೆ.
ಒಂದು ವೇಳೆ ವ್ಯಕ್ತಿಯು ಕನಸಿನಲ್ಲಿ ಶನಿದೇವರ ವಿಗ್ರಹವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸಂತೋಷವನ್ನು ಅನುಭವಿಸುತ್ತೀರ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ವ್ಯಕ್ತಿಯು ಸಾಡೇಸಾತಿ ಶನಿ ದೋಷವನ್ನು ಎದುರಿಸುತ್ತಿದ್ದರೆ ಆ ವ್ಯಕ್ತಿಯು ಮಿಶ್ರ ಫಲವನ್ನು ಪಡೆಯುತ್ತಾನೆ.
ಕನಸಿನಲ್ಲಿ ಶನಿದೇವನ ದೇವಸ್ಥಾನವನ್ನು ಕಂಡರೆ ಅದು ತುಂಬಾ ಶುಭ ಸಂಕೇತವಾಗಿರುತ್ತದೆ. ಮುಂದಿನ ದಿನಗಳಲ್ಲಿ ಶನಿದೇವನ ಆಶೀರ್ವಾದ ದೊರೆತು ಹಣಕಾಸಿನಲ್ಲಿ ಅಭಿವೃದ್ಧಿಯನ್ನು ಕಾಣುತ್ತಾನೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಕನಸಿನಲ್ಲಿ ಶನಿದೇವನು ಕಾಗೆ ಮೇಲೆ ಕುಳಿತುಕೊಂಡು ಹೋಗುವ ಹಾಗೆ ಕನಸು ಕಂಡರೆ ನೀವು ಈಗಾಗಲೇ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಅದು ಸೂಚಿಸುತ್ತದೆ. ಇಷ್ಟೇ ಅಲ್ಲದೆ ಕುಟುಂಬದಲ್ಲಿ ಜಗಳ, ಅವಮಾನ ಹಾಗೂ ಹಲವಾರು ರೀತಿಯ ತೊಂದರೆಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂಬುದನ್ನು ಸಹ ಸೂಚಿಸುತ್ತದೆ.