ಒಂದು ರೂಪಾಯಿಗೂ ಬೆಲೆ ಇದೆ. ಹಣವನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡ್ತೇವೆ. ಲಕ್ಷ್ಮಿ ರೂಪದಲ್ಲಿ ಅದ್ರ ಪೂಜೆ ಮಾಡ್ತೇವೆ. ಒಂದು ವೇಳೆ ನಾಣ್ಯ, ನೋಟು ಕೆಳಗೆ ಬಿದ್ರೆ ಕಿರಿಕಿರಿಯಾಗುತ್ತದೆ. ನಾಣ್ಯ ಕೆಳಗೆ ಬಿದ್ರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಎಂಬುದನ್ನು ಇಂದು ನೋಡೋಣ.
ಹಣದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಆರ್ಥಿಕ ಸದೃಡತೆಗಾಗಿ ಎಲ್ಲರೂ ದಿನವಿಡಿ ದುಡಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಹಿವಾಟು ಹೆಚ್ಚಾಗಿದೆ. ಆದ್ರೂ ನಗದು ಬಳಕೆ ಕಡಿಮೆಯೇನಾಗಿಲ್ಲ. ಬಹುತೇಕರು ಜೇಬಿನಲ್ಲಿ ಹಣವಿಟ್ಟುಕೊಳ್ತಾರೆ. ಮತ್ತೆ ಕೆಲವರು ಪ್ಯಾಂಟ್ ಜೇಬಿನಲ್ಲಿ ಪರ್ಸ್ ಇಟ್ಟುಕೊಳ್ತಾರೆ. ಪ್ಯಾಂಟ್ ಜೇಬಿನಲ್ಲಿರುವ ಹಣ,ಬೇರೆ ವಸ್ತುಗಳನ್ನು ತೆಗೆಯುವಾಗ ಕೆಳಗೆ ಬೀಳುತ್ತದೆ. ಇಲ್ಲವೆ ನೀವು ಪ್ಯಾಂಟ್ ತೆಗೆದಾಗ ಅಥವಾ ಪರ್ಸ್ ತೆಗೆದಾಗ ಹಣ ಕೆಳಗೆ ಬೀಳುತ್ತದೆ.
ಕಷ್ಟಪಟ್ಟು ದುಡಿದ ಹಣ ಕೆಳಗೆ ಬಿದ್ರೆ ನಮ್ಮ ಮೇಲೆ ನಮಗೆ ಕೋಪ ಬರುವುದುಂಟು. ಕೆಲವರು, ಜೇಬಿನಲ್ಲಿದ್ದ ಎಲ್ಲ ಹಣ ಬಿತ್ತು, ಇನ್ನೇನು ಕಾದಿದೆಯೋ ಎಂದುಕೊಳ್ತಾರೆ. ಖರ್ಚು ಹೆಚ್ಚಾಗುತ್ತೇನೋ ಎಂದುಕೊಳ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಘಟನೆಗೂ ಮಹತ್ವ ನೀಡಲಾಗಿದೆ. ಹಾಗೆ ಅವುಗಳನ್ನು ಶುಭ-ಅಶುಭದ ಜೊತೆ ಜೋಡಿಸಲಾಗಿದೆ. ಜೇಬಿನಿಂದ ಅಥವಾ ಪರ್ಸ್ ನಿಂದ ಹಣ ಕೆಳಗೆ ಬಿದ್ದರೆ ಏನು ಸಂಕೇತ ಎಂಬುದನ್ನೂ ಶಾಸ್ತ್ರದಲ್ಲಿ ಹೇಳಲಾಗಿದೆ. ನಾವಿಂದು ಹಣ ಕೆಳಗೆ ಬಿದ್ರೆ ಏನು ಮುನ್ಸೂಚನೆ ಎಂಬುದನ್ನು ನಿಮಗೆ ಹೇಳ್ತೆವೆ.
ಇದ್ದಕ್ಕಿದ್ದಂತೆ ನಾಣ್ಯ ಅಥವಾ ನೋಟು ಬೀಳುವುದು ಮಂಗಳಕರ ವಲ್ಲ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನಾಣ್ಯ ಕೆಳಗೆ ಬೀಳುವುದು ಮಂಗಳಕರವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ನಾಣ್ಯ ಕೆಳಗೆ ಬಿದ್ರೆ ಅದು ಮುಂದೆ ಬರಲಿರುವ ಉತ್ತಮ ಸುದ್ದಿಯ ಸೂಚನೆಯಾಗಿದೆ. ನಾಣ್ಯ ತಾನಾಗಿಯೇ ಕೆಳಗೆ ಬೀಳಬೇಕು. ನೀವು ಶುಭ ಸಂಕೇತ ಎಂಬ ಕಾರಣಕ್ಕೆ, ಉದ್ದೇಶ ಪೂರ್ವಕವಾಗಿ ನಾಣ್ಯವನ್ನು ಕೆಳಗೆ ಬೀಳಿಸಿದರೆ ಅದಕ್ಕೆ ಮಹತ್ವವಿಲ್ಲ.
ನಿಮ್ಮ ಜೇಬಿನಿಂದ ನೋಟು ಅಥವಾ ನಾಣ್ಯ ಕೆಳಗೆ ಬಿದ್ದಾಗ ನೀವು ಖುಷಿಯಾಗಬಹುದು. ಯಾಕೆಂದ್ರೆ ನಿಮಗೆ ಶೀಘ್ರದಲ್ಲೇ ಆರ್ಥಿಕ ವೃದ್ಧಿಯಾಗಲಿದೆ. ಆದಷ್ಟು ಬೇಗ ಹೆಚ್ಚಿನ ಹಣ ನಿಮ್ಮ ಕೈ ಸೇರಲಿದೆ ಎಂಬುದು ಇದರ ಅರ್ಥವಾಗಿದೆ. ಹಣ ನೆಲದ ಮೇಲೆ ಚೆಲ್ಲಿದೆ ಎಂದ್ರೆ ಅದು ಹಣದ ಹೊಳೆಯ ಸಂಕೇತ.
ಜೇಬಿನಿಂದ, ಪರ್ಸ್ ನಿಂದ ಅಥವಾ ಕೈ ತಪ್ಪಿ ಹಣ ಕೆಳಗೆ ಬಿದ್ದರೆ, ಪ್ರಕೃತಿಯು ಮುಂಬರುವ ಸಂಪತ್ತಿನ ಬಗ್ಗೆ ನಿಮಗೆ ಸೂಚನೆ ನೀಡ್ತಿದೆ ಎಂದುಕೊಳ್ಳಿ. ನೀವೂ ಎಂದಿಗೂ ಯೋಚಿಸದ ಸಂಪತ್ತು ನಿಮ್ಮ ಮನೆಗೆ ಬರುವುದನ್ನು ನೀವು ಕಾಣಬಹುದು.
ಇನ್ನು ಬಟ್ಟೆ ಧರಿಸುವಾಗ ಅಥವಾ ತೆಗೆಯುವಾಗ ಜೇಬಿನಿಂದ ನಾಣ್ಯ ಬಿದ್ದರೆ ಈಗಾಗಲೇ ಹೇಳಿದಂತೆ ಅದು ಮಂಗಳಕರ. ಜೇಬಿನಿಂದ 10 ರೂಪಾಯಿ ನೋಟು ಅಥವಾ ನಾಣ್ಯ ಬಿದ್ದರೆ ಅದು ಹಣದ ರಸೀದಿಯನ್ನು ಸೂಚಿಸುತ್ತದೆ. ಶೀಘ್ರದಲ್ಲೇ ಹಣ ಎಲ್ಲಿಂದಲೋ ಬರಲಿದೆ ಎಂಬುದರ ಸೂಚಕವಾಗಿದೆ. ವಹಿವಾಟಿನ ಸಮಯದಲ್ಲಿ 10 ರ ನಾಣ್ಯ ಅಥವಾ ನೋಟು ಕೈನಿಂದ ಕೆಳಗೆ ಬಿದ್ದಿದ್ದರೆ ಅದು ಹಠಾತ್ ಹಣದ ಲಾಭವನ್ನು ಸೂಚಿಸುತ್ತದೆ.
ಹಣ ಕೆಳಗೆ ಬಿದ್ದರೂ ನನಗೆ ಸಂಪತ್ತು,ಹಣ ಸಿಗಲಿಲ್ಲವೆಂದು ನೀವು ಹೇಳಬಹುದು. ಹಣ ಕೈತಪ್ಪಿ ಕೆಳಗೆ ಬಿದ್ದ ತಕ್ಷಣ ನಿಮ್ಮ ಆರ್ಥಿಕ ವೃದ್ಧಿಯಾಗಬೇಕೆಂದೇನಿಲ್ಲ. ಶೀಘ್ರದಲ್ಲೇ ಹಣ ನಿಮ್ಮ ಕೈ ಸೇರಲಿದೆ ಎಂದರ್ಥ. ಹಾಗೆ ಹಣ ನಿಮ್ಮ ಕೈಗೆ ನೇರವಾಗಿ ಸಿಗುತ್ತದೆ ಎಂದಲ್ಲ. ಬೇರೆ ರೂಪದಲ್ಲಿಯೂ ನಿಮ್ಮ ಸಂಪತ್ತಿನ ವೃದ್ಧಿಯಾಗುತ್ತದೆ ಎಂಬ ಸೂಚನೆಯಿದು.