ಕನಸಿನ ಲೋಕದಲ್ಲಿ ನಾನಾ ಸಂಗತಿಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ನಮ್ಮನ್ನು ಭಯಗೊಳಿಸಿದರೆ, ಇನ್ನೊಂದಷ್ಟು ಖುಷಿ ನೀಡುತ್ತವೆ. ಆದರೆ, ಗಾಢ ನಿದ್ರೆಯಲ್ಲಿ ಆ ಕತ್ತಲಲೋಕದಲ್ಲಿ ಕಾಣಿಸುವ ಈ ಎಲ್ಲಾ ಸಂಗತಿಗಳಿಗೆ ಸ್ವಪ್ನಶಾಸ್ತ್ರದಲ್ಲಿ ನಾನಾ ಅರ್ಥಗಳಿವೆ. ಕನಸುಗಳು ನಮಗೆ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ ಎಂಬ ನಂಬಿಕೆ ಕೂಡಾ ಅನಾದಿ ಕಾಲದಿಂದಲೂ ನಮ್ಮಲ್ಲಿ ಬೇರೂರಿದೆ. ಅಂತೆಯೇ, ನಿಮ್ಮ ಕನಸಿನಲ್ಲಿ ಗಿಳಿ ಕಂಡರೆ ಅದು ಏನನ್ನು ಸಂಕೇತಿಸುತ್ತದೆ ಎಂದು ನಿಮಗೆ ತಿಳಿದಿದೆಯೇ…? ಅದನ್ನು ಇಲ್ಲಿ ನೋಡೋಣ.
ಕನಸಿನಲ್ಲಿ ಗಿಳಿ ಕಂಡರೆ ಅದಕ್ಕೆ ಬೇರೆ ಬೇರೆ ಅರ್ಥ ಇದೆ. ಸಾಮಾನ್ಯವಾಗಿ ಸ್ವಪ್ನದಲ್ಲಿ ಗಿಳಿ ಕಾಣಿಸಿಕೊಂಡರೆ ಅದನ್ನು ಶುಭಕರ, ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ಸಂದರ್ಭದಲ್ಲಿ ಇದು ಅಶುಭ ಸಂಕೇತ ಕೂಡಾ ಹೌದು…! ಹೀಗಾಗಿ, ಯಾವ ಸಂದರ್ಭ ಹಾಗೂ ಯಾವ ರೀತಿಯ ಗಿಳಿಯ ಕನಸನ್ನು ನೀವು ಕಂಡಿರಿ ಎಂಬುದು ಕೂಡಾ ಮುಖ್ಯವಾಗುತ್ತದೆ ಎನ್ನುತ್ತದೆ ಸ್ವಪ್ನಶಾಸ್ತ್ರ.
ಇವೆಲ್ಲಾ ಶುಭವಂತೆ…ಪಂಜರದಲ್ಲಿರುವ ಗಿಳಿಯ ದೃಶ್ಯ ನಿಮ್ಮ ಕನಸಿನಲ್ಲಿ ಸುಳಿದಾಡಿದರೆ ಅದು ಸಂಪತ್ತು, ಧನಾಗಮನದ ಸಂಕೇತ ಎಂದರ್ಥವಂತೆ. ಭುಜದ ಮೇಲೆ ಗಿಳಿ ಕುಳಿತಿರುವುದನ್ನು ನೀವು ನೋಡಿದರೆ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತದೆ. ಜೋಡಿ ಗಿಳಿ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಬಹಳ ಮಂಗಳಕರ ಎಂಬುದು ಸಂಕೇತವಂತೆ. ಇನ್ನು ಸಾಮಾನ್ಯ ಗಿಳಿಯನ್ನು ಕಂಡರೆ ನಿಮ್ಮ ಮನೆಗೆ ಅತಿಥಿಗಳು ಬರುತ್ತಾರೆ ಎಂದರ್ಥವಂತೆ. ಜತೆಗೆ, ನಿಮ್ಮ ಗೌರವ ಹೆಚ್ಚುತ್ತದೆ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ ಸಂತೋಷ ನೆಲೆಯಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ.
ಇವೆಲ್ಲಾ ಅಶುಭವಂತೆ…ಆದರೆ, ನಿಮ್ಮ ಕನಸಿನಲ್ಲಿ ಕಂಡ ಗಿಳಿ ನಿಮ್ಮೊಂದಿಗೆ ಮಾತನಾಡುತ್ತಿದ್ದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ, ಯಾರಾದರೂ ನಿಮ್ಮನ್ನು ಮೋಸಗೊಳಿಸಬಹುದು ಎಂಬುದು ಇದರರ್ಥವಂತೆ. ಇನ್ನು, ನಿಮ್ಮ ಕನಸಿನಲ್ಲಿ ಗಿಳಿಯನ್ನು ಮನೆಗೆ ತರುವುದನ್ನು ಕಂಡರೆ ಅದು ಕೂಡಾ ಒಳ್ಳೆಯದಲ್ಲ ಎಂಬುದು ನಂಬಿಕೆ ಇದೆ. ಇಂತಹ ಕನಸು ಕಂಡಾಗ ಜಾಗರೂಕರಾಗಿರಬೇಕು ಹಾಗೂ ನಿಮ್ಮ ವೈಯಕ್ತಿಕ ವಿಷಯಗಳನ್ನು ಯಾರಿಗೂ ಹೇಳಬಾರದಂತೆ. ಯಾಕೆಂದರೆ, ಈ ಕನಸು ಕಂಡಾಗಲೂ ಯಾರಾದರೂ ನಿಮ್ಮನ್ನು ಮೋಸಗೊಳಿಸಬಹುದು ಎಂದು ನಂಬಿಕೆ ಇದೆ. ಹೀಗೆ ಗಿಳಿಯ ಕನಸಿನ ಬಗ್ಗೆ ನಾನಾ ವಿಶ್ಲೇಷಣೆ, ಅರ್ಥಗಳಿವೆ.