IND vs WI: ಮುಂದುವರೆದ ರೋ‘ಹಿಟ್’ ಪಾರುಪತ್ಯ! ಮತ್ತೊಂದು ಸರಣಿ ಗೆದ್ದ ಟೀಂ ಇಂಡಿಯಾ

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಸಾಧನೆ ಮಾಡಿದ್ದ ಟೀಂ ಇಂಡಿಯಾ ಇದೀಗ ಕೆರಿಬಿಯನ್ನರ ವಿರುದ್ಧದ ಟಿ-20 ಸರಣಿಯನ್ನೂ ಗೆದ್ದುಬೀಗಿದೆ. 5 ಪಂದ್ಯಗಳ ಟಿ-20 ಸರಣಿಯನ್ನು 1 ಪಂದ್ಯ ಬಾಕಿ ಇರುವಂತೆಯೇ ರೋಹಿತ್ ಶರ್ಮಾ ಪಡೆ ತನ್ನದಾಗಿಸಿಕೊಂಡಿದೆ.

ಬೃಹತ್ ಮೊತ್ತ ಪೇರಿಸಿದ ಭಾರತ

ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆದ 4ನೇ ಟಿ-20 ಪಂದ್ಯದಲ್ಲಿ ಭಾರತ 59 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು 3-1 ಅಂತರದಲ್ಲಿ ಮುನ್ನಡೆ ಸಾಧಿಸುವುದರ ಜೊತೆಗೆ ಸರಣಿ ಕೈವಶ ಮಾಡಿಕೊಂಡಿತು.  

ಇದನ್ನೂ ಓದಿ: CWG 2022: ಸತತ ಮೂರನೇ ಬಾರಿಗೆ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ವಿನೆಸ್ ಫೋಗಾಟ್

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಭಾರತದ ಪರ ರಿಷಭ್ ಪಂತ್(44), ರೋಹಿತ್ ಶರ್ಮಾ(33), ಸಂಜು ಸ್ಯಾಮ್ಸನ್(ಅಜೇಯ 30), ಸೂರ್ಯಕುಮಾರ್ ಯಾದವ್(23), ದೀಪಕ್ ಹೂಡಾ(21) ಮತ್ತು ಅಕ್ಸರ್ ಪಟೇಲ್(ಅಜೇಯ 20) ರನ್ ಗಳಿಸಿದರು. ಒಬೆಡ್ ಮೆಕಾಯ್ ಮತ್ತು ಅಲ್ಜಾರಿ ಜೋಸೆಫ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಅಕೇಲ್ ಹೊಸೈನ್ 1 ವಿಕೆಟ್ ಕಬಳಿಸಿದರು.

ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್ ದಾಳಿ

192 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಭಾರತೀಯ ಬೌಲರ್‍ ಗಳ ಮಾರಕ ದಾಳಿಗೆ ಸಿಲುಕಿ ನಲುಗಿತು. ಪರಿಣಾಮ 19.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ವಿಂಡೀಸ್ ತಂಡ ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು. ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್(24), ರೋವ್ಮನ್ ಪೊವೆಲ್(24), ಶಿಮ್ರಾನ್ ಹೆಟ್ಮೆಯರ್(19), ಕೈಲ್ ಮೇಯರ್ಸ್(14) ರನ್ ಗಳಿಸಿದರು. ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಅರ್ಷದೀಪ್ ಸಿಂಗ್ 3 ವಿಕೆಟ್ ಕಬಳಿಸಿದರು. ಅವೇಶ್ ಖಾನ್, ಅಕ್ಸರ್ ಪಟೇಲ್ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: CWG 2022: ಫೈನಲ್​ನಲ್ಲಿ ಪಾಕಿಸ್ತಾನದ ಕುಸ್ತಿಪಟುವನ್ನು ಮಣಿಸಿ ಚಿನ್ನ ಗೆದ್ದ ನವೀನ್..!

ನಾಯಕನಾಗಿ ರೋಹಿತ್ ಶರ್ಮಾ ಸಾಧನೆ

ಈ ಸರಣಿ ಗೆಲ್ಲುವುದರ ಮೂಲಕ ರೋಹಿತ್ ಶರ್ಮಾ ಪೂರ್ಣವಧಿ ನಾಯಕನಾಗಿ ಆಯ್ಕೆಯಾದ ಬಳಿಕ ನಡೆದ ಎಲ್ಲಾ 8 ಸರಣಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರೋಹಿತ್ ನಾಯಕನಾಗಿ ತಮ್ಮ ಗೆಲುವಿನ ನಾಗಲೋಟ ಮುಂದುವರೆಸಿದ್ದು, ‘ಸೋಲಿಲ್ಲದ ಸರದಾರ’ನಾಗಿ ಮಿಂಚುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment