ನಿಮ್ಮ ಮನೆಗೆ ಈ ಬಣ್ಣ ಇದ್ದರೆ ಒಳಿತು!

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಯಾವ ಭಾಗದ ಕೋಣೆಗೆ ಯಾವ ಬಣ್ಣ ಸೂಕ್ತವಾಗಿರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರಗಳಿವೆ. ಯಾವ ದಿಕ್ಕು ಹಾಗೂ ಯಾವ ಕೋಣೆ ಎಂಬುದರ ಆಧಾರದಲ್ಲಿ ಯಾವ ಬಣ್ಣ ಇರಬೇಕು ಎಂಬುದರ ವಿವರಣೆ ಇಲ್ಲಿದೆ. ಮೊದಲಿಗೆ ಮನೆಯ ಯಜಮಾನರಾದಂಥವರು ಇರುವಂಥ ಮಾಸ್ಟರ್ ಬೆಡ್​ರೂಮ್​ ಬಗ್ಗೆ ಹೇಳುವುದಾದರೆ, ಅದು ನೈರುತ್ಯ ಭಾಗದಲ್ಲೇ ಇರಬೇಕು. ಮತ್ತು ಆ ಭಾಗದಲ್ಲಿ ನೀಲಿ ಬಣ್ಣದ ಪೇಂಟ್ ಇರಬೇಕು. ವಿಶ್ರಾಂತಿಗಾಗಿ ಇರುವ ಕೋಣೆಯಲ್ಲಿ ಸಕಾರಾತ್ಮಕವಾದ ವಾತಾವರಣ ಇರಬೇಕು. ಇಲ್ಲಿ ಯಥೇಚ್ಛವಾದ ಬೆಳಕು ಹಾಗೂ ತಂಪಾಗಿರುವಂತೆ ನೋಡಿಕೊಳ್ಳಬೇಕು. ಜತೆಗೆ ಕಣ್ಣಿಗೆ ಹಾಯೆನಿಸುವಂಥ ಬಣ್ಣ ಆಗಿರಬೇಕು. ವಾಸ್ತುವಿನ ಪ್ರಕಾರ, ಎಲ್ಲವೂ ಬಿಳಿ ಬಣ್ಣದ ಪ್ಯಾಟರ್ನ್​ನ ಜತೆಗೆ ನೀಲಿ ಬಣ್ಣದ ಬಾಗಿಲು ಮತ್ತಯ ಪೀಠೋಪಕರಣಗಳು ಇರುವುದು ಉತ್ತಮ ಕಾಂಬಿನೇಷನ್. ಇದರ ಹೊರತಾಗಿ ತಿಳಿ ಅಥವಾ ನೀಲಿಬಣ್ಣದ ನೆರಳಿರುವಂಥದ್ದು ಮಲಗುವ ಕೋಣೆಗೆ ಹೊಂದುತ್ತದೆ. ಭಾರೀ ಹಾಗೂ ಗಾಢ ಬಣ್ಣಗಳನ್ನು ಬಳಸಬಾರದು.

ಅತಿಥಿಗಳ ಕೋಣೆ/ಡ್ರಾಯಿಂಗ್ ರೂಮ್-ಅತಿಥಿಗಳ ಕೋಣೆ ಅಥವಾ ಡ್ರಾಯಿಂಗ್ ರೂಮ್​ಗೆ ವಾಯವ್ಯ ಭಾಗ ಸೂಕ್ತವಾದದ್ದು. ಆದ್ದರಿಂದ ಈ ಕೋಣೆಗೆ ಬಿಳಿಯ ಬಣ್ಣ ಸೂಕ್ತವಾದದ್ದು.

ಮಕ್ಕಳ ಕೋಣೆ-ವಾಯವ್ಯ ಭಾಗವು ಬೆಳೆದ ಮಕ್ಕಳ ಕೋಣೆಗೆ ಸೂಕ್ತವಾದದ್ದು. ಇಲ್ಲಿಗೆ ಬಿಳಿಯ ಬಣ್ಣ ಸರಿಯಾಗುತ್ತದೆ.

ಅಡುಗೆ ಕೋಣೆ-ಆಗ್ನೇಯ ಭಾಗ ಸೂಕ್ತವಾದದ್ದು. ಇಡೀ ಕೋಣೆಯನ್ನು ಕಿತ್ತಳೆ ಅಥವಾ ಕೆಂಪು ಬಣ್ಣದಿಂದ ಪೇಂಟ್ ಮಾಡಿಸಬೇಕು. ಅಡುಗೆ ಕೋಣೆಯು ಅಗ್ನಿ ತತ್ವವನ್ನು ಪ್ರತಿನಿಧಿಸುವುದರಿಂದ ಢಾಳಾದ ಬಣ್ಣಗಳನ್ನು ಬಳಸಬೇಕು. ಹಳದಿ ಬಣ್ಣ ಕೂಡ ಆರಿಸಿಕೊಳ್ಳಬಹುದು. ಕಂದು ಅಥವಾ ಗುಲಾಬಿ ಬಣ್ಣವನ್ನಾದರೂ ಬಳಸಬಹುದು. ಅಡುಗೆ ಮನೆಯ ಕ್ಯಾಬಿನೆಟ್​ಗಳಿಗೆ ನಿಂಬೆಯ ಹಳದಿ, ಕಿತ್ತಳೆ ಅಥವಾ ಹಸಿರು ಬಳಸಬಹುದು.

ಸ್ನಾನದ ಕೋಣೆ/ಶೌಚಾಲಯ-ಸ್ನಾನದ ಕೋಣೆ, ಶೌಚಾಲಯಕ್ಕೆ ವಾಯವ್ಯ ಸೂಕ್ತವಾದದ್ದು. ಆದ್ದರಿಂದ ಅಲ್ಲಿ ಬಿಳಿಯ ಬಣ್ಣದ ಪೇಂಟ್ ಮಾಡಿದರೆ ಉತ್ತಮ.

ಹಾಲ್/ಹಜಾರ-ಹಾಲ್ ಅಥವಾ ಹಜಾರ ಈಶಾನ್ಯ ಅಥವಾ ವಾಯವ್ಯ ಭಾಗಕ್ಕೆ ಇರಬೇಕು. ಹಳದಿ ಅಥವಾ ಬಿಳಿ ಬಣ್ಣದ ಪೇಂಟ್ ಮಾಡಬೇಕು.

ಮನೆಯ ಹೊರಭಾಗ-ಇದು ಮನೆಯ ಯಜಮಾನನ/ಯಜಮಾನಿಯ ರಾಶಿ ಯಾವುದು ಎಂಬುದರ ಮೇಲೆ ಆಧಾರವಾಗಿರುತ್ತದೆ. ಹಳದಿಯುಕ್ತ ಬಿಳಿ ಅಥವಾ ಕಿತ್ತಳೆ ಬಣ್ಣ ಎಲ್ಲ ರಾಶಿಗಳಿಗೂ ಆಗಿಬರುತ್ತದೆ.

ದೇವರ ಕೋಣೆ-ದೇವರ ಕೋಣೆ ಈಶಾನ್ಯದಲ್ಲೇ ಇರಬೇಕು. ಗರಿಷ್ಠವಾದ ಸೂರ್ಯನ ಬೆಳಕು ಬರಬೇಕು. ಹಳದಿ ಬಣ್ಣ ಬಹಳ ಸೂಕ್ತವಾದದ್ದು. ಇಲ್ಲಿಗೆ ಢಾಳಾದ ಬಣ್ಣವನ್ನು ಬಳಸಕೂಡದು. ಈ ಪ್ರದೇಶ ಮನೆಯಲ್ಲಿ ಪ್ರಶಾಂತವಾಗಿರಬೇಕು.

ಮುಖ್ಯ ದ್ವಾರ/ತಲೆಬಾಗಿಲು-ಮುಖ್ಯ ದ್ವಾರಕ್ಕೆ ಸಾಫ್ಟ್​ ಬಣ್ಣವನ್ನು ಆರಿಸಿಕೊಳ್ಳಬೇಕು. ಬಿಳಿ, ಸಿಲ್ವರ್ ಅಥವಾ ಮರದ ಬಣ್ಣಗಳನ್ನು ಆರಿಸಿಕೊಳ್ಳಬೇಕು. ಕಪ್ಪು, ಕೆಂಪು ಅಥವಾ ಗಾಢ ನೀಲಿ ಬಣ್ಣ ಬಳಸಕೂಡದು. ಮುಖ್ಯ ದ್ವಾರವು ಗಡಿಯಾರದ ಮುಳ್ಳಿನ ರೀತಿ ಒಳ ಭಾಗಕ್ಕೆ ತೆರೆಯುವಂತಿರಬೇಕು.

ಸ್ಟಡಿ ರೂಮ್-ಒಂದು ವೇಳೆ ಹೋಮ್ ಆಫೀಸ್ ಇದ್ದಲ್ಲಿ ಅದಕ್ಕೆ ತಿಳಿ ಹಸಿರು, ನೀಲಿ, ಕ್ರೀಮ್ ಅಥವಾ ಬಿಳಿಯ ಬಣ್ಣವನ್ನು ಬಳಸಬೇಕು. ಢಾಳಾದ ಬಣ್ಣವನ್ನು ಬಳಸಬಾರದು.

ಬಾಲ್ಕನಿ/ವರಾಂಡ-ಬಾಲ್ಕನಿ ಉತ್ತರ ಅಥವಾ ಪೂರ್ವಕ್ಕೆ ಇರಬೇಕು. ನೀಲಿ, ಕ್ರೀಮ್ ಅಥವಾ ತಿಳಿ ಗುಲಾಬಿ ಮತ್ತು ಹಸಿರು ಬಣ್ಣವನ್ನು ಬಳಸಬೇಕು. ಇಲ್ಲೂ ಗಾಢವಾದ ಬಣ್ಣಗಳನ್ನು ಬಳಸಬಾರದು.

ಗ್ಯಾರೇಜ್-ಗ್ಯಾರೇಜ್​ಗೆ ವಾಯವ್ಯ ದಿಕ್ಕು ಸೂಕ್ತವಾದದ್ದು. ಬಿಳಿ, ಹಳದಿ, ನೀಲಿ ಅಥವಾ ಇತರ ತಿಳಿ ಶೇಡ್ ಬಣ್ಣಗಳು ಸೂಕ್ತವಾದವು.

Leave a Comment