ಮಾರ್ಚ್ 8 ರಂದು ಶಿವರಾತ್ರಿ ಆಚರಣೆಗೆ ಎಲ್ಲಾ ಸಿದ್ದತೆ ನಡೆಯುತ್ತಿದೆ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಶಿವನ ಆರಾಧನೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಕೆಲವರು ಶಿವಾಲಯಕ್ಕೆ ಹೋಗಿ ಅಲ್ಲೇ ಶಿವರಾತ್ರಿ ಆಚರಿಸಿದರೆ, ಇನ್ನೂ ಕೆಲವರು ಮನೆಯಲ್ಲೇ ಇದ್ದು ಉಪವಾಸ, ಜಾಗರಣೆ ಮಾಡಲು ರೆಡಿಯಾಗುತ್ತಿದ್ದಾರೆ.
ದೇವರ ಪೂಜೆ ಮಾಡುವಾಗ ನಾವು ಸಂಪೂರ್ಣ ಸಂಪ್ರದಾಯಬದ್ಧವಾಗಿ ಮಾಡಲು ಸಾಧ್ಯವಾಗದಿದ್ದರೂ ವಿಘ್ನ ಆಗುವಂಥ ಯಾವುದೇ ಕೆಲಸಗಳನ್ನು ಮಾಡಬಾರದು. ಅದ್ದೂರಿ, ಆಡಂಬರ ಇಲ್ಲದಿದ್ದರೂ ಒಂದು ದಳ ಬಿಲ್ವಪತ್ರೆಯನ್ನು ದೇವರಿಗೆ ಇಟ್ಟು ಕೈ ಮುಗಿದರೆ ಶಿವನು ಪ್ರಸನ್ನನಾಗಿ ಆಶೀರ್ವದಿಸುತ್ತೇನೆ. ಶಿವರಾತ್ರಿ ಸಮಯದಲ್ಲಿ ನೀವು ಯಾವ ಕೆಲಸ ಮಾಡಬೇಕು? ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಇದೆ
ಹಬ್ಬ ಹರಿದಿನಗಳಂದು ಮುಂಜಾನೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ಮಡಿ ಉಟ್ಟು, ದೇವರ ಕೋಣೆಯನ್ನು ಶುಚಿಗೊಳಿಸಿ ಬೆಳಗ್ಗೆ 7 ಗಂಟೆ ಒಳಗೆ ಪೂಜೆ ಮುಗಿಸಬೇಕು. ಆದರೆ ಕೆಲವರು ಮಧ್ಯಾಹ್ನ 12 ಗಂಟೆ ಆದರೂ ಸ್ನಾನ ಮಾಡುವುದಿಲ್ಲ. ಆದರೆ ಎಂದಿಗೂ ಈ ತಪ್ಪು ಮಾಡದಿರಿ. ಶಿವನಿಗೆ ಅಭಿಷೇಕ ಮಾಡುವಾಗ ಯಾವುದೇ ಕಾರಣಕ್ಕೂ ಕಂಚಿನ ಪಾತ್ರೆಯಲ್ಲಿ ಹಾಲನ್ನು ಅರ್ಪಿಸಬಾರದು. ತಾಮ್ರದ ಪಾತ್ರೆಯಲ್ಲಿ ಹಾಲನ್ನು ಅಭಿಷೇಕ ಮಾಡಿ.
ಪೂಜೆಗೆ ಆದಷ್ಟು ಬಿಳಿ ಹೂಗಳನ್ನೇ ಬಳಸಿ. ಏಕೆಂದರೆ ಶಿವನಿಗೆ ಬಿಳಿ ಬಣ್ಣದ ಹೂಗಳು ಬಹಳ ಪ್ರಿಯವಾದ್ದರಿಂದ ದಾಸವಾಳ, ಕನಕಾಂಬರದಂಥ ಹೂ ಬೇಡ. ಇತರ ದಿನಗಳಲ್ಲಿ ಶಿವನಿಗೆ ಕೇದಿಗೆ ಹೂ ಬಳಸುವುದಿಲ್ಲ. ಆದರೆ ಶಿವರಾತ್ರಿ ಹಬ್ಬದಂದು ಅದನ್ನು ಬಳಸಿದರೆ ಬಹಳ ಶ್ರೇಷ್ಠ. ಹಾಗೇ ಶಿವನ ಪೂಜೆಗೆ ತುಳಸಿ ಎಲೆ ಬಳಸಬಾರದು. ಬದಲಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು.
ದೇವರ ಫೋಟೋಗಳಿಗೆ ಸಾಮಾನ್ಯವಾಗಿ ಕುಂಕುಮ ಹಚ್ಚುತ್ತೇವೆ. ಆದರೆ ಶಿವನ ಫೋಟೋಗೆ ಎಂದಿಗೂ ಕುಂಕುಮ ಹಚ್ಚಬಾರದು. ಬದಲಿಗೆ ವಿಭೂತಿ ಹಚ್ಚಬೇಕು ಅಥವಾ ಶ್ರೀಗಂಧ ಹಚ್ಚಬೇಕು. ಹಾಗೇ ಆದಷ್ಟು ಹಳದಿ, ಬಿಳಿ ಬಣ್ಣದ ಬಟ್ಟೆ ಧರಿಸಿ ಪೂಜೆ ಮಾಡಿ, ಕೆಂಪು ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಿ.
ಉಪವಾಸ ಎಂದರೆ ಏನನ್ನೂ ತಿನ್ನಬಾರದು ಎಂದರ್ಥವಲ್ಲ, ಸಂಪೂರ್ಣ ಉಪವಾಸ ಮಾಡಲು ಸಾಧ್ಯವಾಗದೆ ಇರುವವರು ಪೊಂಗಲ್ , ಉಪ್ಪಿಟ್ಟು, ಅವಲಕ್ಕಿ, ಹಣ್ಣು, ಹಾಲು ಸೇವಿಸುವ ಮೂಲಕ ಉಪವಾಸ ಮಾಡಿ ಪೂಜೆ ಮಾಡಬಹುದು. ಆದರೆ ಹಬ್ಬದ ದಿನ ಮಸಾಲೆ ಪದಾರ್ಥಗಳು, ಮಾಂಸಾಹಾರದಿಂದ ದೂರ ಇರಿ.
ಹಬ್ಬದ ದಿನ ಜಗಳ, ಮುನಿಸು, ಜೋರು ಮಾತುಗಳನ್ನು ಪಕ್ಕಕ್ಕೆ ಇಟ್ಟು ಓಂ ನಮ: ಶಿವಾಯ ಮಂತ್ರ ಜಪಿಸಿ. ಶಂಕರನ ಜಪ ಮಾಡುವುದರಿಂದ ನಿಮ್ಮ ಜೀವನದ ಅರ್ಧ ಸಮಸ್ಯೆಗಳು ದೂರವಾದಂತೆ. ಅಲ್ಲದೆ, ಓಂ ನಮ: ಶಿವಾಯ ಮಂತ್ರ ಉಚ್ಛರಿಸುವುದರಿಂದ ಪಾಸಿಟಿವ್ ವೈಬ್ಸ್ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಜಾಗರಣೆ ಮಾಡಬೇಕೆನ್ನುವವರು ಶಿವಾಲಯಕ್ಕೆ ತೆರಳಿ ಇತರರೊಂದಿಗೆ ಭಜನೆಯಲ್ಲಿ ಪಾಲ್ಗೊಳ್ಳಿ. ಅದರ ಬದಲಿಗೆ ಜಾಗರಣೆ ನೆಪದಲ್ಲಿ ಸಿನಿಮಾ ನೋಡುವುದು, ಜೂಜು ಆಡುವುದು, ಮೋಜು ಮಸ್ತಿ ಮಾಡುವುದು ಮಾಡಬೇಡಿ. ಹೀಗೆ ಮಾಡಿದರೆ ನಿಮ್ಮ ಪೂಜೆ ಶಿವನಿಗೆ ಸಲ್ಲುವುದಿಲ್ಲ.