ಬಿಳಿ ಬಟ್ಟೆಗಳು ನೋಡುಗರಿಗೆ ತುಂಬಾ ಇಷ್ಟವಾಗುತ್ತವೆ. ಹೆಚ್ಚು ಹೊತ್ತು ಹಾಕಿಕೊಳ್ಳಬೇಕು ಎಂಬ ಆಸೆ. ಆದರೆ ಹಾಕಿಕೊಳ್ಳಲು ಆಗುವುದಿಲ್ಲ. ಕಾರಣವೇನೆಂದರೆ ಎಲ್ಲಿ ಕೊಳೆಯಾಗಿಬಿಡುತ್ತದೆ ಎನ್ನುವ ಭಯ. ಅಷ್ಟೇ ಅಲ್ಲದೆ ಬಿಳಿ ಬಟ್ಟೆ ಒಮ್ಮೆ ಕೊಳೆಯಾದರೆ, ಬಟ್ಟೆಯ ಕಲೆಗಳನ್ನು ಹೋಗಲಾಡಿಸುವುದು ಬಹಳ ಕಷ್ಟ. ಅಷ್ಟು ಸುಲಭವಾಗಿ ಕಲೆಗಳು ಬಿಡುವುದಿಲ್ಲ.
ಬಿಟ್ಟರೂ ಕೂಡ ಬಿಳಿ ಬಟ್ಟೆಯಲ್ಲಿ ಮೊದಲಿನ ಹೊಳಪು ಇರುವುದಿಲ್ಲ. ಇದರ ಜೊತೆಗೆ ಮನೆಗೆ ಪೂರೈಕೆಯಾಗಿ ಬರುವಂತಹ ಹಾರ್ಡ್ ವಾಟರ್ ನಾವು ಹಾಕುವ ಡಿಟರ್ಜಂಟ್ ಪೌಡರ್ ಜೊತೆಗೆ ರಿಯಾಕ್ಟ್ ಆಗಿ ಬಟ್ಟೆಯ ಬಣ್ಣವನ್ನು ಬದಲಿಸುತ್ತದೆ. ಇಲ್ಲಿ ಬಿಳಿ ಬಟ್ಟೆಗಳನ್ನು ಉತ್ತಮವಾಗಿ ಅದೇ ರೀತಿ ದೀರ್ಘಕಾಲ ನಿರ್ವಹಿಸುವ ಕೆಲವೊಂದು ಟಿಪ್ಸ್ ಗಳನ್ನು ತಿಳಿಸಿಕೊಡಲಾಗಿದೆ.
ಬೇಕಿಂಗ್ ಸೋಡಾ ಬಳಸಿ:-ಹಳದಿ ಬಣ್ಣಕ್ಕೆ ತಿರುಗಿದ ನಿಮ್ಮ ಬಿಳಿ ಬಟ್ಟೆಗಳನ್ನು ಸುಲಭವಾಗಿ ಸ್ವಚ್ಛಮಾಡುವ ಇನ್ನೊಂದು ವಿಧಾನ ಎಂದರೆ ಅದು ಬೇಕಿಂಗ್ ಸೋಡಾ. ನೀವು ಅಡುಗೆ ಮಾಡಲು ಬಳಸುತ್ತೀರಲ್ಲ, ಅದೇ! ಸಿಂಪಲ್ ಆಗಿ ಅರ್ಧ ಬಕೆಟ್ ನೀರು ತೆಗೆದುಕೊಂಡು ಅದರಲ್ಲಿ ಒಂದು ಕಪ್ ಬೇಕಿಂಗ್ ಸೋಡಾ ಹಾಕಿ.ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಬಿಳಿ ಬಣ್ಣದ ಬಟ್ಟೆಗಳನ್ನು ಇದರಲ್ಲಿ ಒಂದು ಗಂಟೆಗಳ ಕಾಲ ನೆನೆ ಹಾಕಿ. ಆನಂತರ ನೀರಿನಲ್ಲಿ ಬಟ್ಟೆಗಳನ್ನು ಸ್ವಚ್ಛ ಮಾಡಿ.
ನಿಂಬೆಹಣ್ಣಿನ ರಸ ಬಳಸಬಹುದು:-ಒಂದು ವೇಳೆ ನಿಮ್ಮ ಬಿಳಿ ಬಣ್ಣದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಕಲೆಗಳು ಏನಾದರೂ ಉಂಟಾಗಿದ್ದರೆ, ನಿಂಬೆಹಣ್ಣು ಅದಕ್ಕೆ ಪರಿಣಾಮಕಾರಿಯಾದ ಒಂದು ಟ್ರೀಟ್ಮೆಂಟ್ ಎಂದು ಹೇಳಬಹುದು. ಅತ್ಯಂತ ಗಾಢವಾದ ಕಲೆಗಳನ್ನು ಸಹ ನಿಂಬೆಹುಳಿ ಬಹಳ ಬೇಗನೆ ತೆಗೆದುಹಾಕುತ್ತದೆ. ನೀವು ಇದಕ್ಕಾಗಿ ಬಹಳ ಕಷ್ಟ ಪಡಬೇಕಾಗಿಲ್ಲ. ಕೇವಲ ಒಂದು ಬಕೆಟ್
ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದರಲ್ಲಿ ಎರಡು ಟೇಬಲ್ ಚಮಚ ನಿಂಬೆ ಹುಳಿ ಸೇರಿಸಿ. ಐದು ನಿಮಿಷ ಇದನ್ನು ಚೆನ್ನಾಗಿ ಮಿಕ್ಸ್ ಆಗಲು ಬಿಟ್ಟು, ಆನಂತರ ನಿಮ್ಮ ಬಟ್ಟೆಗಳನ್ನು ಇದರಲ್ಲಿ ನೆನೆಹಾಕಿ. ಒಂದು ಗಂಟೆ ಕಳೆದ ನಂತರದಲ್ಲಿ ಸಾಧಾರಣವಾಗಿ ಬಟ್ಟೆ ಸ್ವಚ್ಛಮಾಡುವ ಹಾಗೆ ಅವುಗಳನ್ನು ಸ್ವಚ್ಛ ಮಾಡಬಹುದು.
ಡಿಷ್ ವಾಶಿಂಗ್ ಸೋಪ್ ಬಳಸಿ:–ಇದು ಪಾತ್ರೆ ತೊಳೆಯುವ ಸೋಪು ತಾನೆ ಎಂದು ಹಗುರವಾಗಿ ಕಾಣಬೇಡಿ. ಇದರಲ್ಲಿ ನಿಮ್ಮ ಬಿಳಿ ಬಟ್ಟೆಯ ಮೇಲಿನ ಕಲೆಗಳನ್ನು ಹೋಗಲಾಡಿಸುವ ಗುಣವಿದೆ. ಡಿಷ್ ವಾಶಿಂಗ್ ಸೋಪ್ ಮಾತ್ರವಲ್ಲದೆ ಲಿಕ್ವಿಡ್ ಕೂಡ ಬಳಸಬಹುದು.ಒಂದು ಬಕೆಟ್ ನೀರಿಗೆ ಒಂದು ಕಪ್ ಸೋಪ್ ಪೌಡರ್ ಅಥವಾ ಲಿಕ್ವಿಡ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಿಮ್ಮ ಬಿಳಿ ಬಣ್ಣದ ಉಡುಪುಗಳನ್ನು ಇದರಲ್ಲಿ 30 ನಿಮಿಷಗಳ ಕಾಲ ನೆನೆಹಾಕಿ. ಆನಂತರ ಬ್ರಷ್ ನಲ್ಲಿ ಉಜ್ಜಿ, ನೀರಿನಲ್ಲಿ ಸ್ವಚ್ಛ ಮಾಡಿ.
ಬ್ಲೀಚ್ ಬಳಸಿ:–ನಿಮ್ಮ ಬಳಿ ಯಾವುದಾದರೂ ಕೊಳೆ ಆಗಿರುವಂತಹ ಬಿಳಿಬಟ್ಟೆ ಇದ್ದರೆ, ಕೊಳೆಯನ್ನು ಸುಲಭವಾಗಿ ತೆಗೆಯಲು ಒಂದು ಟಿಪ್ಸ್ ಹೇಳಿಕೊಡುತ್ತೇವೆ ಕೇಳಿ. ಅರ್ಧ ಬಕೆಟ್ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ. ಅದಕ್ಕೆ ಕಾಲು ಕಪ್ ಬ್ಲೀಚ್ ಹಾಕಿ ಮಿಶ್ರಣ ಮಾಡಿ. ಈ ನೀರಿನಲ್ಲಿ ನಿಮ್ಮ ಬಿಳಿ ಬಟ್ಟೆಗಳನ್ನು ಹತ್ತು ನಿಮಿಷಗಳ ಕಾಲ ನೆನೆಹಾಕಿ. ನಂತರ ಸಾಧಾರಣವಾಗಿ ಬಟ್ಟೆ ಸ್ವಚ್ಛ ಮಾಡುವ ಹಾಗೆ ಮಾಡಿ.ಸಾಮಾನ್ಯವಾಗಿ ಕಲೆಗಳು ಇದರಲ್ಲಿ ಹೊರಟುಹೋಗಿರುತ್ತವೆ. ಒಂದು ವೇಳೆ ಹೋಗದೆ ಇದ್ದರೆ ಮತ್ತೊಮ್ಮೆ ಇದನ್ನು ರಿಪೀಟ್ ಮಾಡಿ. ಆದರೆ ಬ್ಲೀಚ್ ಬಳಸುವಾಗ ನೀವು ಕೈಗಳಿಗೆ ರಬ್ಬರ್ ಗ್ಲೌಸ್ ಹಾಕಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.
ಬಿಸಿಲಿನಲ್ಲಿ ಒಣಹಾಕಿ:–ಸೂರ್ಯನ ಬಿಸಿಲಿನಲ್ಲಿ ಅಪಾರವಾದ ಶಕ್ತಿಯಿದೆ. ಅದು ನಿಮಗೂ ಗೊತ್ತು. ಅದು ನಿಮ್ಮ ಬಟ್ಟೆಗಳನ್ನು ತನ್ನ ಬ್ಲೀಚಿಂಗ್ ಪವರ್ ನಿಂದ ಬಿಳಿ ಬಣ್ಣಕ್ಕೆ ತಿರುಗಿಸುವ ಶಕ್ತಿ ಪಡೆದಿದೆ. ನೀವು ಮೇಲಿನ ಯಾವುದಾದರೂ ವಿಧಾನಗಳಲ್ಲಿ ಬಟ್ಟೆ ಒಗೆದ ನಂತರದಲ್ಲಿ ಅವುಗಳು ತೇವಾಂಶ ಇರುವಾಗ ಬಿಸಿಲಿನಲ್ಲಿ ಒಣಗಿ ಹಾಕಿ. ಸೂರ್ಯನ ಹಾನಿಕಾರಕ ಕಿರಣಗಳು ನಿಮ್ಮ ಬಿಳಿ ಬಟ್ಟೆಗಳನ್ನು ಒಣಗಿಸುತ್ತದೆ ಮತ್ತು ಮತ್ತೆ ತನ್ನ ಹೊಳಪು ಕಂಡುಕೊಳ್ಳುವಂತೆ ಮಾಡುತ್ತದೆ. ಈ ಟಿಪ್ಸ್ ಗಳನ್ನು ಅನುಸರಿಸುವುದರಿಂದ ನಿಮ್ಮ ಬಿಳಿ ಬಟ್ಟೆಗಳು ಮತ್ತೆ ಮೊದಲಿನಂತೆ ಹೊಳಪಿನಿಂದ ತುಂಬಿರುತ್ತವೆ.