ಪಿಸಿಓಡಿಗೆ ಚಿಕಿತ್ಸೆ ನೀಡುವ ಮೊದಲು ಅದರ ಮೂಲ ಕಾರಣವನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಪಿಸಿಓಡಿ ಹಾಮೋನುಗಳ ಅಸಮತೋಲನದಿಂದಾಗಿ ಸಂಭವಿಸುತ್ತದೆ. ಸಾಮಾನ್ಯವಾಗಿ ಸ್ತ್ರೀ ಅಂಡಾಶಯಗಳು ಸ್ತ್ರೀ ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟೀರಾನ್ ಮತ್ತು ಕೆಲವು ಪ್ರಮಾಣದ ಪುರುಷ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ.
ಪುರುಷರ ಮತ್ತೊಂದು ಲೈಂಗಿಕ ಹಾರ್ಮೋನ್ ಆದ ಆಂಡ್ರೋಜನ್ ಪ್ರಮಾಣ ಅಂಡಾಶಯದಲ್ಲಿ ಹೆಚ್ಚಾಗುತ್ತದೆ. ಇದನ್ನು ಹೈಪರಾಂಡ್ರೊಜೆನಿಸಂ ಎಂದು ಕರೆಯಲಾಗುತ್ತದೆ. ಆಂಡ್ರೊಜೆನ್ನ ಉನ್ನತ ಮಟ್ಟದ ಸ್ರವಿಸುವಿಕೆಯು ಅಂಡೋತ್ಪತ್ತಿಯಲ್ಲಿ ತೊಂದರೆ ಉಂಟುಮಾಡುತ್ತದೆ.
ಇದು ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬದಲ್ಲಿ ಯಾರಾದರೂ ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆ ಇತರೆ ಮಹಿಳೆಯರಿಗೂ ಬರುವ ಸಾಧ್ಯತೆ ಇದೆ.
ಪಿಸಿಓಡಿ ಸಮಸ್ಯೆಗೆ ಕಾರಣ..?
ಇದಕ್ಕೆ ಕಾರಣಗಳೆಂದರೆ ಹಾರ್ಮೋನ್ ಅಸಮತೋಲನ, ಅಸಮರ್ಪಕ ಜೀವನಶೈಲಿ, ಅಧಿಕ ಒತ್ತಡ, ವ್ಯಾಯಾಮದ ಕೊರತೆ, ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು ಕೂಡ ಪಿಸಿಒಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣ, ಅನುವಂಶೀಯತೆಯ ಪ್ರಭಾವವೂ ಇದೆ.
ಪಿಸಿಓಡಿ ಸಮಸ್ಯೆಯ ಲಕ್ಷಣಗಳು
1) ತೂಕ ಹೆಚ್ಚಳ : ಪ್ರಮುಖವಾಗಿ ಪಿಸಿಓಡಿ ಸಮಸ್ಯೆ ದೇಹದ ತೂಕ ಹೆಚ್ಚಾಗುವಲ್ಲಿ ಕಾರಣವಾಗುತ್ತದೆ ಎಂದು ಹೇಳಬಹುದು. ವಿಶೇಷವಾಗಿ ಸೊಂಟದ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಬೊಜ್ಜಿನ ಅಂಶ ಶೇಖರಣೆಯಾಗಿ ದೈಹಿಕ ತೂಕ ನಿಯಂತ್ರಣ ಮೀರಿ ಹೆಚ್ಚಾಗುತ್ತದೆ. ನಂತರ ಇದನ್ನು ಕರಗಿಸಲು ಮಹಿಳೆಯರು ಹೆಚ್ಚು ಶ್ರಮ ಪಡಬೇಕಾಗುತ್ತದೆ.
2) ಅನಗತ್ಯವಾಗಿ ಕೂದಲ ಬೆಳವಣಿಗೆ: ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರನ್ನು ನೀವು ಈಗಾಗಲೇ ಎಂದಾದರೂ ಗಮನಿಸಿರಬಹುದು. ಸ್ತ್ರೀಯರಾಗಿದ್ದರೂ ಕೂಡ ಅವರಿಗೆ ಪುರುಷರಂತೆ ತುಟಿಯ ಮೇಲ್ಭಾಗದಲ್ಲಿ ಮೀಸೆಯ ಆಕಾರದಲ್ಲಿ ಕೂದಲು ಕಂಡುಬಂದಿರುತ್ತದೆ.
ಇದಕ್ಕೆ ಪ್ರಮುಖವಾಗಿ ಅವರ ದೇಹದಲ್ಲಿ ಅತಿ ಹೆಚ್ಚು ಉತ್ಪತ್ತಿಯಾಗುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನು ಕಾರಣವಾಗಿರುತ್ತದೆ. ಇದು ಸಂಪೂರ್ಣವಾಗಿ ಮಹಿಳೆಯರ ದೇಹದ ಮೇಲೆ ಪುರುಷರ ಗುಣಲಕ್ಷಣಗಳ ಪ್ರಭಾವ ಬೀರುತ್ತದೆ.
ಇದರಿಂದ ಮುಖದ ಮೇಲೆ ಮತ್ತು ದೇಹದ ಕೆಲವು ಭಾಗಗಳಲ್ಲಿ ಕೂದಲಿನ ಬೆಳವಣಿಗೆ ಉಂಟಾಗುತ್ತದೆ. ಎದೆಯ ಮೇಲ್ಭಾಗದಲ್ಲಿ, ತುಟಿಯ ಮೇಲ್ಭಾಗದಲ್ಲಿ ಹಾಗೂ ತೊಡೆಗಳ ಭಾಗದಲ್ಲಿ ಇದು ಸಾಮಾನ್ಯ ಎಂದು ಹೇಳಬಹುದು.
3) ಕೂದಲು ಉದುರುವುದು: ಯಾವ ಮಹಿಳೆಯರಲ್ಲಿ ಪಿಸಿಓಡಿ ಸಮಸ್ಯೆ ಇರುತ್ತದೆ ಅವರ ತಲೆ ಕೂದಲು ತುಂಬಾ ಉದುರುತ್ತದೆ. ಅದರಲ್ಲೂ ನೆತ್ತಿಯ ಭಾಗದಲ್ಲಿ ಕೂದಲು ಉದುರಿ ಬೋಳಾಗಿ ಕಾಣಿಸುವುದು..
4) ಮೊಡವೆ ಸಮಸ್ಯೆ: ಮೊಡವೆ ಸಮಸ್ಯೆಗೆ ಯಾವುದೇ ರೀತಿಯ ಪರಿಹಾರ ಮಾಡಿದರೂ ಸಹ ಪಿಸಿಓಡಿ ಸಮಸ್ಯೆ ಇರುವ ಮಹಿಳೆಯರಲ್ಲಿ ಮೊಡವೆಗಳು ಕಡಿಮೆಯಾಗುವುದಿಲ್ಲ.. ಹೀಗಾಗಿ ನೀವು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.
5) ಚಿಂತೆ ಮತ್ತು ಖಿನ್ನತೆ: ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿರುತ್ತದೆ.. ಹಾರ್ಮೋನುಗಳ ವ್ಯತ್ಯಾಸದಿಂದ ದೇಹದ ನಾನಾ ರೀತಿಯ ಬದಲಾವಣೆಗಳು ಆಗುವುದರಿಂದ ತಮಗೆ ಅರಿವಿಲ್ಲದಂತೆ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ದೊಡ್ಡದಾಗಿ ಯೋಚಿಸುವ ರೀತಿ ಆಗುತ್ತದೆ.
6) ಹೆಚ್ಚಿನ ರಕ್ತಸ್ರಾವ: ಗರ್ಭಾಶಯದ ಒಳಪದರವು ದೀರ್ಘಕಾಲದವರೆಗೆ ಇರುತ್ತದೆ. ಇದರಿಂದಾಗಿ ಪಿಸಿಓಡಿ ಹೊಂದಿರುವ ಮಹಿಳೆಯು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ರಕ್ತಸ್ರಾವವಾಗುತ್ತದೆ.
ಪಿಸಿಒಡಿ ಸಮಸ್ಯೆ ಇದ್ರೆ ಮಕ್ಕಳಾಗುವುದಿಲ್ವಾ.?
ಪಿಸಿಒಡಿ ಸಮಸ್ಯೆ ಇರುವವರು ಗರ್ಭ ಧರಿಸಲು ಬಹಳ ಕಷ್ಟಪಡುತ್ತಾರೆ. ಗರ್ಭಿಣಿಯಾದರೂ ಗರ್ಭಧಾರಣೆಯ ಸಮಯ ತೊಂದರೆಗಳನ್ನು ಅನುಭವಿಸುತ್ತಾರೆ ಎಂಬುದು ನಿಜ. ಆದರೆ ಅವರು ಮಕ್ಕಳನ್ನು ಹೆರುವುದು ಸಾಧ್ಯವೇ ಇಲ್ಲ ಎಂದು ಇದರರ್ಥವಲ್ಲ. ಪರಿಸ್ಥಿತಿಯನ್ನು ನಿರ್ವಹಿಸುವ ಮೂಲಕ ಪಿಸಿಒಎಸ್ ಇರುವ ಮಹಿಳೆಯರು ಗರ್ಭಧರಿಸಿ ಆರೋಗ್ಯಕರವಾದ ಮಕ್ಕಳನ್ನು ಹೆರಬಹುದು.
ಯಾವುದೇ ಚಿಕಿತ್ಸೆಯ ನೆರವಿಲ್ಲದೇ ಸಹಜವಾಗಿಯೇ ಗರ್ಭಧರಿಸಬಹುದು. ಇದಕ್ಕಾಗಿ ಆಹಾರಕ್ರಮ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಆ ಮೂಲಕ ಅಂಡಾಣು ಉತ್ಪತ್ತಿಯ ಸಂಭಾವ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಆಹಾರ ಕ್ರಮ, ನಿಯಮಿತ ವ್ಯಾಯಾಮದಿಂದ ದೇಹ ತೂಕದ ಶೇ.10ರಷ್ಟನ್ನಾದರೂ ಕಳೆದುಕೊಂಡಲ್ಲಿ ಸಂತಾನೋತ್ಪತ್ತಿಯ ಸಾಧ್ಯತೆ ಹೆಚ್ಚಾಗುತ್ತದೆ.
ಪಿಸಿಓಡಿ ಸಮಸ್ಯೆ ತಪ್ಪಿಸಲು ಸೂಕ್ತ ಆಹಾರ ಕ್ರಮ
ಹಸಿರು ಸೊಪ್ಪು ತರಕಾರಿಗಳು ಅದರಲ್ಲೂ ಮುಖ್ಯವಾಗಿ ಕ್ಯಾಬೇಜ್, ಕಾಲೀಪ್ಲವರ್, ಬ್ರಾಕೋಲಿ, ಬಸಲೆ, ಪಾಲಕ್ಸೊಪ್ಪು, ಮೂಲಂಗಿ, ಸೌತೆಕಾಯಿ ಹಾಗೂ ಹಸಿರು ಸೊಪ್ಪು–ತರಕಾರಿಗಳನ್ನು ಹೆಚ್ಚಿಗೆ ಉಪಯೋಗಿಸಬೇಕು.
ದ್ವಿದಳ ಧಾನ್ಯಗಳು (ಲೆಗ್ಯುಮ್) ಬೀನ್ಸ್, ಕಿಡ್ನಿ ಬೀನ್ಸ್ , ಸೋಯಾ ಬೀನ್ಸ್ಗಳಲ್ಲಿ ಸಿಗುವ ಇನೊಸಿಟಾಲ್ ಎಂಬ ವಿಟಮಿನ್ನಂತಹ ಅಂಶದಿಂದ ಇನ್ಸುಲಿನ್ ಹೆಚ್ಚಳವಾಗಿ, ಪ್ರತಿರೋಧದ ನಿಯಂತ್ರಣವಾಗಿ ಅಂಡ್ರೊಜನ್ ಹೆಚ್ಚಳವನ್ನು ತಡೆಗಟ್ಟುವುದು ಸಾಬಿತಾಗಿದೆ.
ಈ ಅಂಶವು ಒಣಹಣ್ಣುಗಳು ಹಾಗೂ ತಾಜಾ ಹಣ್ಣುಗಳಾದ ದ್ರಾಕ್ಷಿ, ಸೇಬು, ಚೆರ್ರಿ, ಸ್ಟ್ರಾಬೇರಿ, ಪ್ಲಮ್, ಅವಾಕೇಡೋ (ಬೆಣ್ಣೆಹಣ್ಣು), ಕಿತ್ತಳೆ, ಕಿವಿಹಣ್ಣುಗಳಲ್ಲಿರುತ್ತವೆ; ತೆಂಗಿನ ಕಾಯಿಯಲ್ಲೂ ಇರುತ್ತದೆ.
ಒಮೇಗಾ–3 ಅಂಶ ಹೆಚ್ಚಿರುವ ವಾಲ್ನಟ್, ಆಲೀವ್ಎಣ್ಣೆ, ಸಾಲ್ಮನ್ಮೀನು, ಅಗಸೆಬೀಜ ಮುಂತಾದುವನ್ನು ಸೇವಿಸಿದಾಗ ಇನ್ಸುಲಿನ್ನ ಪ್ರತಿರೋಧವು ಕಡಿಮೆಯಾಗುತ್ತದೆ. ಕೆಂಪಕ್ಕಿಯ ಜೊತೆ ಹೆಚ್ಚು ನಾರಿನ ಅಂಶವುಳ್ಳ ಆಹಾರವನ್ನು ಸೇವಿಸಬೇಕು. ಯಾವುದೇ ಕಾರಣಕ್ಕೂ ಒಂದೇ ಒಂದು ದಿನ ಕೂಡ ಉಪಾಹಾರವನ್ನು ನಿಲ್ಲಿಸಬೇಡಿ.
ತಪ್ಪದೆ ವ್ಯಾಯಾಮ ಮಾಡಿ
ದಿನವೂ ಒಂದು ಗಂಟೆ ಕಾಲ ಬಿರುಸಿನ ನಡಿಗೆ ಅಥವಾ ಏರೋಬಿಕ್ಸ್, ಸ್ವಿಮಿಂಗ್, ಸೈಕ್ಲಿಂಗ್, ಯೋಗ-ಪ್ರಾಣಾಯಾಮಗಳನ್ನು ತಜ್ಞರಿಂದ ಕಲಿತು ಮಾಡಬೇಕು.
ಇಂಥ ವ್ಯಾಯಾಮಗಳನ್ನು ಕನಿಷ್ಠ 6-8 ತಿಂಗಳು ಬಿಡದೆ ಮಾಡಿದಾಗ ಹಾರ್ಮನ್ನ ಅಸಮತೋಲನ ಕಡಿಮೆಯಾಗುತ್ತದೆ; ಆಗ ಇನ್ಸುಲಿನ್ ಪ್ರತಿರೋಧ ಕಡಿಮೆಯಾಗಿ ಅಂಡಾಣುವಿನ ಬಿಡುಗಡೆಗೆ ಸಹಾಯವಾಗುತ್ತದೆ.
ಇನ್ನು ಪಿಸಿಒಎಸ್/ ಪಿಸಿಓಡಿಯನ್ನು ಗುಣಪಡಿಸಬಹುದು ಪರಿಸ್ಥಿತಿಯನ್ನು ಚಿಕಿತ್ಸೆಯಿಂದ ನಿರ್ವಹಿಸಬಹುದೇ ಹೊರತು ಗುಣಪಡಿಸಲಾಗದು. ಅಸಮರ್ಪಕ ಋತುಚಕ್ರ, ಮೊಡವೆ ಮತ್ತು ಕೂದಲು ಬೆಳವಣಿಗೆಯ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಔಷಧಗಳಿವೆ.
ಗರ್ಭ ಧರಿಸಲು ಕಷ್ಟವಾದರೆ ಫಲವತ್ತತೆಗೆ ಚಿಕಿತ್ಸೆಗಳಿವೆ. ಆಹಾರ ನಿಯಂತ್ರಣ ಮತ್ತು ನಿಯಮಿತ ವ್ಯಾಯಾಮ ಮಾಡಬೇಕು. ಪಿಸಿಓಎಸ್ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಹಾಗಾಗಿ ಪೀರಿಯೆಡ್ಸ್ ಬದಲಾವಣೆ ಗಮನಿಸುವುದು, ಈ ಸಮಸ್ಯೆ ಪತ್ತೆ ಹಚ್ಚಿ ಆರಂಭದಲ್ಲೇ ಚಿಕಿತ್ಸೆ ನೀಡುವುದು ಮುಖ್ಯ.