ಏನೇ ಮಾಡಿದ್ರು ಮಕ್ಕಳ ಶೀತ ಕಡಿಮೆ ಆಗ್ತಿಲ್ವ?ಈ ಸುಲಭದ ಮನೆಮದ್ದು ಟ್ರೈ ಮಾಡಿ!

ಚಳಿಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಕಾಣಿಸಿ ಕೊಳ್ಳುವುದು ಸಹಜ. ಹೀಗಾಗಿ ಚಳಿಗಾಲದಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಶೀತ, ನಗೆಡಿ ಹಾಗೂ ಕೆಮ್ಮು ಕಾಣಿಸಿಕೊಂಡಾಗ ಪೋಷಕರಲ್ಲಿ ಚಿಂತೆ ಮೂಡುವುದು ಸಹಜ. ಇದಕ್ಕಾಗಿ ಚಿಂತೆ ಮಾಡದೆ ಕೆಲವೊಂದು ಮನೆಮದ್ದುಗಳನ್ನು ಪ್ರಯೋಗಿಸಿದರೆ ಅದರಿಂದ ಶೀತ, ನೆಗಡಿ ಹಾಗೂ ಕೆಮ್ಮು ನಿವಾರಣೆ ಆಗುವುದು.

​ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆ–ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆ ನಿವಾರಣೆ ಮಾಡಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಮನೆಯಲ್ಲೇ ಪ್ರಯೋಗಿಸಬಹುದು. ಆದರೆ ಮಕ್ಕಳಲ್ಲಿ ಇದರ ತೀವ್ರತೆಯು ಅಧಿಕವಾಗಿದ್ದರೆ ಆಗ ಮನೆಮದ್ದು ಪ್ರಯೋಗಿಸುವ ಬದಲು ನೇರವಾಗಿ ವೈದ್ಯರ ಬಳಿಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಮನೆಮದ್ದುಗಳು ಯಾವುದು ಎಂದು ತಿಳಿಯಲು ನೀವು ತಯಾರಾಗಿ.

​ಹಬೆ(ಸ್ಟೀಮ್)–ಸಣ್ಣ ಮಕ್ಕಳಲ್ಲಿ ಶೀತದ ಸಮಸ್ಯೆಯಿದ್ದರೆ ಮತ್ತು ಉಸಿರಾಡಲು ಮಗುವಿಗೆ ಸಮಸ್ಯೆ ಆಗುತ್ತಲಿದ್ದರೆ ಆಗ ನೀವು ಮಗುವಿಗೆ ಹಬೆ ನೀಡಬೇಕು. ಮಗು ಸ್ನಾನಗೃಹದಲ್ಲಿ ಹಾಗೆ ಬಿಸಿ ನೀರಿನ ಶಾವರ್ ಮುಂದೆ ನಿಂತುಕೊಳ್ಳಲಿ ಅಥವಾ ದೊಡ್ಡ ಪಾತ್ರೆಯಲ್ಲಿ ಬಿಸಿ ನೀರು ಇಡಿ ಮತ್ತು ಇದರ ಹಬೆಯನ್ನು ಮಗು ಉಸಿರಾಡುವಂತೆ ಮಾಡಿ. ಮಗುವಿನ ತಲೆಗೆ ಟವೆಲ್ ಮುಚ್ಚಿಕೊಳ್ಳಿ ಮತ್ತು 10-15 ನಿಮಿಷ ಕಾಲ ಹೀಗೆ ಮಾಡಲಿ. ನೀಲಗಿರಿ ಎಣ್ಣೆಯನ್ನು ಇದಕ್ಕೆ ಹಾಕಿದರೆ ಆಗ ಮಗುವಿಗೆ ಮತ್ತಷ್ಟು ಶಮನ ಸಿಗುವುದು.

​ಜೇನುತುಪ್ಪ–ಜೇನುತುಪ್ಪದಲ್ಲಿ ನಿಮ್ಮ ಬೆರಳನ್ನು ಅದ್ದಿಕೊಳ್ಳಿ ಮತ್ತು ಇದನ್ನು ಮಗು ಹಾಗೆ ಚೀಪುವಂತೆ ಮಾಡಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿ. ಮಗು ಐದು ವರ್ಷಕ್ಕಿಂತ ದೊಡ್ಡದಾಗಿದ್ದರೆ ಆಗ ನೀವು ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ದಾಲ್ಚಿನಿ ಹುಡಿ ಹಾಕಿ ಇದನ್ನು ಸೇವಿಸಲು ಕೊಡಿ.

​ಓಮ ಕಾಳು–ಓಮ ಕಾಳು ಮತ್ತು ತುಳಸಿ ಎಲೆ ಹಾಕಿಕೊಂಡು ನೀರನ್ನು ಬೀಸಿಮಾಡಿ. ಇದು ಕೆಮ್ಮು ನಿವಾರಣೆ ಮಾಡುವುದು ಮತ್ತು ಎದೆಗಟ್ಟುವಿಕೆ ಶಮನ ಮಾಡುವುದು.

​ಮಸಾಜ್–ಎರಡು ವರ್ಷ ಸಣ್ಣ ಮಕ್ಕಳಿಗೆ ಮಸಾಜ್ ಅದ್ಭುತವಾಗಿ ಕೆಲಸ ಮಾಡುವುದು. ಬೆಳ್ಳುಳ್ಳಿ ಜತೆಗೆ ಸಾಸಿವೆ ಎಣ್ಣೆ ಬಿಸಿ ಮಾಡಿ ಮತ್ತು ಅದನ್ನು ಮಗುವಿನ ಎದೆ, ಬೆನ್ನು ಮತ್ತು ಕುತ್ತಿಗೆಗೆ ಮಸಾಜ್ ಮಾಡಿ. ಮಗುವಿನ ಅಂಗೈ ಮತ್ತು ಪಾದದ ಅಡಿಗೆ ಕೂಡ ಎಣ್ಣೆ ಹಚ್ಚಿದರೆ ತಕ್ಷಣವೇ ಶಮನ ಸಿಗುವುದು.

​ಸೂಪ್ ಅಥವಾ ತಾಜಾ ಹಣ್ಣಿನ ಜ್ಯೂಸ್–ಮಗು ಶೀನು ಮತ್ತು ಕೆಮ್ಮುತ್ತಿರುವ ವೇಳೆ ಆಕೆ/ಆತನಿಗೆ ಹೆಚ್ಚಿನ ದ್ರವಾಂಶ ನೀಡುವುದು ಅತೀ ಅಗತ್ಯವಾಗಿರುವುದು. ಬಿಸಿ ನೀರು ಪದೇ ಪದೇ ಕುಡಿಯುತ್ತಾ ಇದ್ದರೆ ಆಗ ಸಾಮಾನ್ಯ ಶೀತ ಕಡಿಮೆ ಆಗುವುದು ಮತ್ತು ಸೋಂಕನ್ನು ಹೊರಗೆ ಹಾಕುವ ಜತೆಗೆ ಗಂಟಲಿನ ಉರಿಯೂತವನ್ನು ಇದು ಕಡಿಮೆ ಮಾಡುವುದು. ಸೂಪ್ ಅಥವಾ ತಾಜಾ ಹಣ್ಣಿನ ಜ್ಯೂಸ್ ಕುಡಿದರೆ ಅದರಿಂದ ಮತ್ತಷ್ಟು ಶಕ್ತಿ ಬರುವುದು.

​ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು—ಗಂಟಲು ನೋವು ನಿವಾರಣೆ ಮಾಡಲು ಒಂದು ಲೋಟ ಬಿಸಿ ನೀರಿಗೆ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸಿಕೊಳ್ಳಬೇಕು. ದಿನಕ್ಕೆ ಎರಡು ಸಲ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಲು ಮಗುವಿಗೆ ಹೇಳಿ. ಇದು ಗಂಟಲಿನ ನೋವನ್ನು ಕಡಿಮೆ ಮಾಡುವುದು.

​ಅರಶಿನ ಹಾಲು—ಅರಶಿನದಲ್ಲಿ ಇರುವ ನಂಜು ನಿರೋಧಕ ಗುಣದಿಂದಾಗಿ ಇದು ವೈರಲ್ ಸೋಂಕು ಆಗಿರುವಂತಹ ಕೆಮ್ಮು ಮತ್ತು ಶೀತವನ್ನು ಕಡಿಮೆ ಮಾಡುವುದು. ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಅರಶಿನ ಹಾಕಿ ಮತ್ತು ಇದನ್ನು ರಾತ್ರಿ ಮಲಗುವ ಮೊದಲು ಮಗುವಿಗೆ ಕುಡಿಯಲು ನೀಡಿ. ಕಿರಿಕಿರಿ ಉಂಟು ಮಾಡುವ ಗಂಟಲು ಮತ್ತು ಮೂಗು ಸೋರುವಿಕೆಯನ್ನು ಇದು ತಡೆಯುವುದು. ಹಾಲಿನಲ್ಲಿ ಕ್ಯಾಲ್ಸಿಯಂ ಮೂಲವು ಹೆಚ್ಚಾಗಿರುವ ಕಾರಣದಿಂದಾಗಿ ಇದು ಮಕ್ಕಳಿಗೆ ಶಕ್ತಿ ನೀಡುವುದು.

​ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ–ತಳ ಆಳವಿರುವ ಪಾತ್ರೆಯಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿ ಮಾಡಿಕೊಳ್ಳಿ, ಬಳಿಕ ಇದಕ್ಕೆ, ಬೆಳ್ಳುಳ್ಳಿಯ ಒ೦ದೆರಡು ದಳವನ್ನು ಜಜ್ಜಿ ಇದಕ್ಕೆ ಸೇರಿಸಿಕೊಂಡು, ಚೆನ್ನಾಗಿ ಉರಿದುಕೊಳ್ಳಿ.. ಇಷ್ಟಾದ ನಂತರ ಈ ಮಿಶ್ರಣವನ್ನು ಒಂದು ದೊಡ್ಡ ಗ್ಲಾಸ್‌ನಷ್ಟು ಉಗುರು ಬೆಚ್ಚಗಿನ ಬಿಸಿನೀರಿಗೆ ಸೇರಿಸಿ ಹಾಗೂ ಒಂದು ಟೇಬಲ್ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಕಲಸಿಕೊಂಡು, ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬಂದರೆ, ಕೆಮ್ಮಿನ ಸಮಸ್ಯೆ ಕೂಡಲೇ ಕಡಿಮೆಯಾಗುತ್ತಾ ಬರುವುದು.

Leave a Comment