ಇದು ಸಿದ್ದರಾಮೋತ್ಸವವಲ್ಲ ಕಾಂಗ್ರೆಸ್ ಅಂತ್ಯೋತ್ಸವ: ಬಿಜೆಪಿ ಟೀಕೆ

ಬೆಂಗಳೂರು: ಹಸಿದವರ ಹೊಟ್ಟೆಗೆ ಅನ್ನದ ಭಾಗ್ಯವಾದೆ ಎಂದು ಸಿದ್ದರಾಮಯ್ಯನವರು ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸಿಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ದುಡ್ಡು ಕೊಟ್ಟಿದ್ದನ್ನು ಮುಚ್ಚಿಟ್ಟು ತನ್ನ ಜೇಬಿನಿಂದ ದುಡ್ಡು‌ ಕೊಟ್ಟಂತೆ ಸಿದ್ದರಾಮಯ್ಯ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಟೀಕಿಸಿರುವ ಬಿಜೆಪಿ, ಇದು ಸಿದ್ದರಾಮೋತ್ಸವವಲ್ಲ ಕಾಂಗ್ರೆಸ್‍ನ ಅಂತ್ಯೋತ್ಸವ ಎಂದು ಕುಟುಕಿದೆ. ‘ನೇಗಿಲ ಯೋಗಿಗೆ ಜಲಭಾಗ್ಯದ ಭಗೀರಥನಂತೆ! ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ನಡೆದ ನೀರಾವರಿ ಅಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸುವ ತಾಕತ್ತು ಇದೆಯೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಬಿಎಸ್‌ವೈಗೆ ಸಿಎಂ ಸ್ಥಾನದ ಆಸೆ ತೋರಿಸಿ ‘ಆಪರೇಷನ್ ಕಮಲ’ ಮಾಡಿಸಿದ್ದು ಯಾರು?: ಸಿದ್ದರಾಮಯ್ಯ

‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ಕೊಡುವುದಾಗಿ ಸಿದ್ದರಾಮಯ್ಯ ಸುಳ್ಳು ಹೇಳಿದ್ದರು. ಅದೇ ಸಿದ್ದರಾಮಯ್ಯ ಇಂದು ಪತ್ರಿಕೆಗಳಲ್ಲಿ ನೇಗಿಲ ಯೋಗಿಗೆ ಜಲಭಾಗ್ಯದ ಭಗೀರಥನಾದೆ ಎಂದು ಬೊಗಳೆ ಬಿಡುತ್ತಿರುವುದು ಹಾಸ್ಯಾಸ್ಪದವಲ್ಲವೇ? ದುರ್ಬಲರ ಪಾಲಿನ ಭರವಸೆಯ ಶಕ್ತಿ ಎಂದು ಬಿಂಬಿಸಿಕೊಳ್ಳುವ ಮುನ್ನ ಸಿದ್ದರಾಮಯ್ಯನವರು ರಾಜ್ಯದ ಜನತೆಯ ತಲೆ ಮೇಲೆ ಹೊರಿಸಿದ ಋಣಭಾರದ ಬಗ್ಗೆಯೂ ಮಾತನಾಡಬೇಕು. 1 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಪ್ರಜೆಗಳ ಮೇಲೆ ಹೊರಿಸಿ ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸಿದ್ದು ನಿಮ್ಮ ಸಾಧನೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಾಮಾಜಿಕ ನ್ಯಾಯದ ಹರಿಕಾರ ಎಂದು ಸಮಾಜವನ್ನು ಒಡೆದು ಹಾಕಿದ್ದು ಸಿದ್ದರಾಮಯ್ಯ ಅವರ ಸಾಧನೆಯೇ? ಸಿದ್ದರಾಮಯ್ಯ ಧರ್ಮ ವಿಭಜನೆ, ಜಾತಿ ವಿಭಜನೆಯ ಹರಿಕಾರ. ಸಿದ್ದರಾಮಯ್ಯರ ವಿಭಜನೆ ಆಧಾರಿತ ಅಭಿವೃದ್ಧಿ ತಿಳಿದುಕೊಳ್ಳಲು ಶಾದಿಭಾಗ್ಯ ಯೋಜನೆಯೊಂದೇ ಸಾಕು! ಸರ್ವಜನಾಂಗದ ಶಾಂತಿಯ ತೋಟವಂತೆ, ಸಿದ್ದರಾಮಯ್ಯನವರೇ ಎಲ್ಲಿತ್ತು ಶಾಂತಿ? ನೀವೇ ನೀಡಿದ ಲೆಕ್ಕದ ಪ್ರಕಾರ ನೀವು ಸಿಎಂ ಆಗಿದ್ದಾಗಿನ ಕಾಲದ 3 ವರ್ಷದಲ್ಲಿ 23 ಕೊಲೆ ನಡೆದಿದ್ದವು. ಅದು ಕೂಡ ದ್ವೇಷದ ಕೊಲೆ. ಸಿದ್ದರಾಮಯ್ಯ ಅವರದ್ದು ಬಾಬರ್‌, ಘಜಿನಿ ಆಡಳಿತವಾಗಿತ್ತೇ ಹೊರತು ಶಾಂತಿಯದ್ದಲ್ಲ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಲೆಕ್ಕ ಬರೆದಿಟ್ಟುಕೊಳ್ಳಿ ಡಿಕೆಶಿ ನಿಮ್ಮ ಲೆಕ್ಕ ಚುಕ್ತಾ ಮಾಡುತ್ತಾರೆ: ಬಿಜೆಪಿ ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment