ಜೀವನಕ್ರಮದ ಜೊತೆಗೇ ಆಹಾರಕ್ರಮವನ್ನೂ ಕೊಂಚ ಬದಲಿಸಿಕೊಳ್ಳುವುದು ಅಗತ್ಯವಾಗಿದೆ. ಈ ಮೂಲಕ ವಾತಾವರಣದಲ್ಲಿ ಆಗಿರುವ ಬದಲಾವಣೆಗೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಬಿಳಿ ಈರುಳ್ಳಿಯನ್ನು ಸೇವಿಸುವ ಮೂಲಕ ಬೇಸಿಗೆಯ ಉಷ್ಣವನ್ನು ನಿರ್ವಹಿಸುವುದು ಸುಲಭ ಎಂದು ಪೋಷಕಾಂಶ ತಜ್ಞರು ಸಲಹೆ ಮಾಡುತ್ತಾರೆ.
ಇನ್ನು ಸಾಕಷ್ಟು ನೀರು ಕುಡಿಯುವುದರ ಜೊತೆಗೇ ದೇಹದ ಉಷ್ಣವನ್ನು ತಗ್ಗಿಸುವ ಹಾಗೂ ಹೆಚ್ಚಿಸದೇ ಇರುವ ಅಹಾರಗಳನ್ನು ಸೇವಿಸುವುದು ಅತಿ ಅಗತ್ಯವಾಗಿದೆ. ಬಿಸಿಲಿನ ಘಳದಿಂದ ತಪ್ಪಿಸಿಕೊಳ್ಳಲು ಕೆಂಪು ಈರುಳ್ಳಿಯನ್ನು ನಾವು ಸೇವಿಸುತ್ತಾ ಬಂದಿದ್ದೇವೆ, ಆದರೆ ಬಿಳಿ ಈರುಳ್ಳಿಯೂ ಬೇಸಿಗೆಯ ಸಮಯದಲ್ಲಿ ಸೇವಿಸಲು ಅತ್ಯುತ್ತಮವಾದ ಆಹಾರವಾಗಿದೆ. ಇದುವರೆಗೆ ನಮಗೆ ಗೊತ್ತೇ ಇರದಿದ್ದ ಈ ವಿಷಯವನ್ನು ಇತ್ತೀಚಿನ ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದ್ದು ಬಿಳಿ ನಿರುಳ್ಳಿಯನ್ನು ಬೇಸಿಗೆಯ ಸಮಯದಲ್ಲಿ ಸೇವಿಸಲು ಪ್ರಾರಂಭಿಸುವಂತೆ ಪೋಷಕಾಂಶ ತಜ್ಞರು ಸಲಹೆ ಮಾಡುತ್ತಿದ್ದಾರೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ:
ಬಿಳಿ ಈರುಳ್ಳಿಯ ಆರೋಗ್ಯಕರ ಪ್ರಯೋಜನಗಳು–ಬಿಳಿ ಈರುಳ್ಳಿ ಹೊಟ್ಟೆಯುಬ್ಬರಿಕೆ ತಡೆಯಲು, ರಾತ್ರಿ ಮಲಗುವಾಗ ಎದುರಾಗುವ ಬೆವರುವಿಕೆಯನ್ನು ತಡೆಯಲು ಹಾಗೂ ಹೊಟ್ಟೆ ಮತ್ತು ಕರುಳುಗಳಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಸಂಖ್ಯೆ ಮತ್ತು ವೈವಿಧ್ಯತೆಗಳನ್ನು ವೃದ್ದಿಸಲು ನೆರವಾಗುತ್ತದೆ. ಬಿಳಿ ಈರುಳ್ಳಿಯಲ್ಲಿಯೇ ಇರುವ ಬ್ಯಾಕ್ಟೀರಿಯಾಗಳು ಅತ್ಯಂತ ಆರೋಗ್ಯಸ್ನೇಹಿಯಾಗಿವೆ ಹಾಗೂ ಇದೇ ಕಾರಣಕ್ಕೆ ಜೀರ್ಣಕ್ರಿಯೆ ಉತ್ತಮಗೊಳಿಸಲು ಬಿಳಿ ಈರುಳ್ಳಿ ಉತ್ತಮ ಆಯ್ಕೆಯಾಗಿದೆ.
ನಿತ್ಯದ ಆಹಾರಕ್ರಮದಲ್ಲಿ ಬಿಳಿ ಈರುಳ್ಳಿಯನ್ನು ಅಳವಡಿಸಿಕೊಳ್ಳುವುದು ಹೇಗೆ?
ಬಿಳಿ ಈರುಳ್ಳಿಯನ್ನು ಸಾಲಾಡ್ ರೂಪದಲ್ಲಿ ಕಬ್ಬಿನರಸರದ ಶಿರ್ಕಾದಲ್ಲಿ ಮುಳುಗಿಸಿ ಸೇವಿಸಿದರೆ ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ದೇಹವನ್ನು ತಂಪಾಗಿರಿಸಲೂ ನೆರವಾಗುತ್ತದೆ. ಸೌತೆಯನ್ನು ಇರಿಸಿ ಸೇವಿಸುವ ಅಹಾರಗಳಲ್ಲೆಲ್ಲಾ ಜೊತೆಗೇ ಬಿಳಿ ಈರುಳ್ಳಿಯನ್ನೂ ಕತ್ತರಿಸಿ ಬಿಲ್ಲೆಯ ರೂಪದಲ್ಲಿ ಇರಿಸಿ ಸೇವಿಸಬಹುದು. ಅಲ್ಲದೇ ಧಾಲ್ ಖಿಚಡಿ ಮೊದಲಾದ ಖಾದ್ಯಗಳನ್ನು ತಯಾರಿಸುವಾಗ ಬೆರೆಸಿಯೂ ಸೇವಿಸಬಹುದು.
ಕೋಸಂಬರಿಯಲ್ಲೂ ಬಳಸಬಹುದು–ಇದು ಹೊಟ್ಟೆಯುಬ್ಬರಿಕೆ ಮತ್ತು ರಾತ್ರಿ ಸಮಯದಲ್ಲಿ ಬೆವರುವ ವ್ಯಕ್ತಿಗಳಿಗೆ ಅತಿ ಸೂಕ್ತವಾದ ಆಹಾರವಾಗಿದೆ. ಅಲ್ಲದೇ ಮಹಾರಾಷ್ಟ್ರದ ಅತಿ ಜನಪ್ರಿಯ ಖಾದ್ಯವಾಗಿರುವ ಬಿಳಿ ಈರುಳ್ಳಿಯ ಕೋಶಿಂಬಿರ್ ಅಥವಾ ಕೋಸಂಬರಿಯನ್ನು ತಯಾರಿಸಲೂ ಬಳಸಬಹುದು. ಈ ಖಾದ್ಯವೂ ಸಾಕಷ್ಟು ಪೌಷ್ಟಿಕವಾಗಿದ್ದು ಬೇಸಿಗೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸಲು ನೆರವಾಗುತ್ತದೆ.
ನಮ್ಮ ಆಹಾರದಲ್ಲಿ ವೈವಿಧ್ಯತೆ ಇರುವುದರಿಂದ ನಮ್ಮ ಆರೋಗ್ಯ ಮಾತ್ರವಲ್ಲ, ನಿಸರ್ಗದ ಆರೋಗ್ಯಕ್ಕೂ ಒಳ್ಳೆಯದು. ಹೇಗೆ ಎಂದರೆ, ನಿಸರ್ಗದಲ್ಲಿ, ಒಂದೇ ಬಗೆಯ ಸಸ್ಯಗಳ ಬದಲು ಹಲವು ಬಗೆಯ ಸಸ್ಯಗಳಿದ್ದಾಗ ನಿಸರ್ಗ ಹೆಚ್ಚು ಸಮತೋಲನವನ್ನು ಪಡೆಯುತ್ತದೆ. ಈ ಕಾರಣಕ್ಕಾಗಿ ಆದರೂ ಬಿಳಿ ಈರುಳ್ಳಿಯ ಸಹಿತ ಇತರ ಸಾಂಪ್ರಾದಾಯಿಕ ಆಹಾರಗಳನ್ನು ಬೆಳೆಸಲು ಕೃಷಿಕರಿಗೆ ಉತ್ತೇಜನ ನೀಡಬೇಕಾಗಿದೆ.