ಬಾಯಿಯ ಕೆಟ್ಟ ವಾಸನೆ ಕಾರಣ ಬೇರೆಯೇ ಇದೆ!

ಕೆಲವರು ಬಾಯಿ ತೆಗೆದರೆ ದುರ್ನಾತ ಬೀರುತ್ತದೆ. ಇದು ಅವರಿಗಷ್ಟೇ ಅಲ್ಲ, ಸುತ್ತಲಿದ್ದವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ನಿಮ್ಮ ಬಾಯಿಯಿಂದ ಬೀರುವ ದುರ್ವಾಸನೆ ಮುಜುಗರ ಮಾತ್ರವಲ್ಲ, ಕಳವಳದ ವಿಷಯವೂ ಆಗಿದೆ.

ಬಾಯಿಯ ದುರ್ವಾಸನೆಗೆ ಕಾರಣಗಳನ್ನು ತಿಳಿದುಕೊಳ್ಳೋಣ.

► ಕಟು ವಾಸನೆಯಿಂದ ಕೂಡಿದ ಆಹಾರ

ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರ ಸಾಮಗ್ರಿಗಳು ಕಟುವಾದ ವಾಸನೆಯಿಂದ ಕೂಡಿದ್ದು, ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ. ಅವುಗಳಲ್ಲಿಯ ಗಂಧಕದ ಸಂಯುಕ್ತಗಳು ಬಾಯಿಯಲ್ಲಿ ವಿಭಜನೆಗೊಂಡು ದುರ್ವಾಸನೆಯನ್ನುಂಟು ಮಾಡುತ್ತವೆ.

► ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು

ಬೆಳಿಗ್ಗೆ ಒಂದು ಬಾರಿ ಮಾತ್ರ ಹಲ್ಲುಗಳನ್ನು ಉಜ್ಜಿಕೊಳ್ಳುವುದರಿಂದ ಬಾಯಿಯ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಹಲ್ಲುಗಳ ನಡುವೆ ಮತ್ತು ವಸಡುಗಳಲ್ಲಿ ಸಿಕ್ಕಿಕೊಂಡಿರುವ ಆಹಾರವು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ.

► ಕಡಿಮೆ ನೀರಿನ ಸೇವನೆ

ನೀರನ್ನು ಸೇವಿಸುವಲ್ಲಿ ಜಿಪುಣತನ ಮಾಡಿದರೆ ಅದರಿಂದ ಬಾಯಿ ಒಣಗುತ್ತದೆ ಮತ್ತು ಜೊಲ್ಲು ಹೆಚ್ಚು ಅಂಟಂಟಾಗುತ್ತದೆ. ಜೊಲ್ಲು ದಪ್ಪವಾದಾಗ ಅದರ ಹರಿವು ಕಡಿಮೆ ಯಾಗುತ್ತದೆ. ಇದು ಬಾಯಿಯನ್ನು ಸ್ವಚ್ಛವಾಗಿಡುವ ಮತ್ತು ಬಾಯಿಯ ಪಿಎಚ್‌ನ್ನು ನಿಗದಿತ ಪ್ರಮಾಣದಲ್ಲಿ ಕಾಯ್ದುಕೊಳ್ಳುವ ಅದರ ಸಾಮರ್ಥ್ಯವನ್ನು ಕುಂದಿಸುತ್ತದೆ.

► ಬಹುಅಂಗಗಳನ್ನು ಕಾಡುವ ಕಾಯಿಲೆಗಳು

ಬಹುಅಂಗ ಕಾಯಿಲೆ ಅಥವಾ ಸಿಸ್ಟೆಮಿಕ್ ಡಿಸೀಸ್ ಶರೀರದ ಒಂದು ಅಂಗಕ್ಕೆ ಸೀಮಿತವಾಗಿರದೆ ವಿವಿಧ ಅಂಗಗಳನ್ನು ಕಾಡುವ ಕಾಯಿಲೆಯಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಯಕೃತ್ತು ಅಥವಾ ಮೂತ್ರಪಿಂಡ ವೈಕಲ್ಯ ಇಂತಹ ಕಾಯಿಲೆಗಳ ಗುಂಪಿಗೆ ಸೇರುತ್ತವೆ. ಕೆಲವು ಪ್ರಕರಣಗಳಲ್ಲಿ ಬಾಯಿಯ ದುರ್ವಾಸನೆ ಇಂತಹ ಕಾಯಿಲೆಯ ಲಕ್ಷಣವಾಗಿರಬಹುದು. ನಿಮ್ಮ ದಂಂತವೈದ್ಯರಿಂದ ತಪಾಸಣೆ ಮಾಡಿಸಿ ಕೊಂಡರೆ ಅವರು ನಿಮಗೆ ಯಾವ ತಜ್ಞವೈದ್ಯರನ್ನು ಸಂಪರ್ಕಿಸಬೇಕು ಎನ್ನುವುದನ್ನು ಸೂಚಿಸುತ್ತಾರೆ.

► ವಸಡಿನ ರೋಗಗಳು

ನಿಮ್ಮ ವಸಡುಗಳ ಯಾವುದೇ ರೋಗವು ಕೂಡ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಪೆರಿಯೊಡೊಂಟಿಟಿಸ್, ಜಿಂಗಿವಿಟಿಸ್ ಮತ್ತು ವಸಡುಗಳಲ್ಲಿ ಬಾವುಗಳಂತಹ ಸೋಂಕುಗಳು ಬಾಯಿಯು ದುರ್ವಾಸನೆಯನ್ನು ಬೀರುವಂತೆ ಮಾಡುತ್ತವೆ.

ಬಾಯಿ ದುರ್ವಾಸನೆಯಿಂದ ಪಾರಾಗಲು ಉಪಾಯಗಳು

► ಯಥೇಚ್ಛ ನೀರಿನ ಸೇವನೆ
 ಪ್ರತಿ ದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಿರಿ. ನಿಮ್ಮ ಶರೀರವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಇದರಿಂದ ಜೊಲ್ಲು ತೆಳ್ಳಗಾಗುತ್ತದೆ ಮತ್ತು ಬಾಯಿಯಲ್ಲಿ ಅದರ ಹರಿವನ್ನು ಹೆಚ್ಚಿಸುತ್ತದೆ ಹಾಗೂ ಬಾಯಿಯ ಪಿಎಚ್‌ನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಆಗಾಗ್ಗೆ ನೀರನ್ನು ಕುಡಿಯುತ್ತಿರುವುದರಿಂದ ಬಾಯಿಯಲ್ಲಿ ಉಳಿದುಕೊಂಡಿರುವ ಆಹಾರ ತ್ಯಾಜ್ಯಗಳಿಂದ ಮುಕ್ತಿ ಪಡೆಯಬಹುದು.

► ದಿನಕ್ಕೆರಡು ಬಾರಿ ಹಲ್ಲಿನ ಸ್ವಚ್ಛತೆ

ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ಬೆಳಿಗ್ಗೆ ಹಲ್ಲುಜ್ಜುವಷ್ಟೇ ಮುಖ್ಯವಾಗಿದೆ. ನಾವು ಸೇವಿಸಿದ ಆಹಾರದ ಕಣಗಳು ರಾತ್ರಿಯಿಡೀ ಹಲ್ಲುಗಳ ಸಂದಿಗಳಲ್ಲಿ ಉಳಿದು ಕೊಂಡು ಕೊಳೆತು ದುರ್ನಾತಕ್ಕೆ ಕಾರಣವಾಗುತ್ತವೆ. ಹೀಗಾಗಿ ಮಲಗುವ ಮುನ್ನ ಹಲ್ಲುಜ್ಜುವುದರಿಂದ ಇದರಿಂದ ಪಾರಾಗಬಹುದು.

► ಪ್ರತಿ ಮೂರು ತಿಂಗಳಿಗೊಮ್ಮೆ ಟೂಥ್‌ಬ್ರಷ್ ಬದಲಿಸಿ
ಒಂದು ಟೂಥ್‌ಬ್ರಷ್‌ನ್ನು ಮೂರು ತಿಂಗಳಿಗಿಂತ ಹೆಚ್ಚು ಕಾಲ ಬಳಸಬಾರದು. ಕಾಲಕ್ರಮೇಣ ಬ್ರಷ್‌ನಲ್ಲಿಯ ಎಳೆಗಳು ಸವೆಯುತ್ತವೆ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.

► ಪ್ರತಿ ದಿನ ಬೆಳಿಗ್ಗೆ ನಾಲಿಗೆಯನ್ನು ಸ್ವಚ್ಛಗೊಳಿಸಿ
ಹಲ್ಲುಗಳನ್ನು ಬ್ರಷ್ ಮಾಡುವಂತೆ ನಾಲಿಗೆಯ ಮೇಲಿನ ಕೊಳೆಯನ್ನು ಪ್ರತಿದಿನ ಬೆಳಿಗ್ಗೆ ತೆಗೆಯುವುದೂ ಮುಖ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ನಾಲಿಗೆಯ ಮೇಲೆ ಸಂಗ್ರಹಗೊಳ್ಳುವ ಈ ದಪ್ಪ ಲೇಪನ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಟಂಗ್‌ಕ್ಲೀನರ್ ಬಳಸಿ ನಾಲಿಗೆಯನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

► ಫ್ಲಾಸಿಂಗ್

ಪ್ರತಿದಿನ ಫ್ಲಾಸಿಂಗ್ ಮಾಡುವುದರಿದ ಹಲ್ಲುಗಳ ನಡುವಿನ ಸಂದಿಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಹಾರದ ಕಣಗಳು ತೊಲಗುತ್ತವೆ. ಬ್ರಷ್‌ಗಳಿಂದ ಇವುಗಳನ್ನು ನಿವಾರಿಸುವುದು ಕಷ್ಟವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಆಹಾರದ ಕಣಗಳು ಹಲ್ಲಿನ ಮತ್ತು ವಸಡುಗಳ ಸಮಸ್ಯೆಗಳಿಗೆ ಕಾರಣವಾಗುತ್ತವೆ.

► ಮದ್ಯಸಾರಮುಕ್ತ ಮೌತ್‌ ವಾಷ್ ಬಳಸಿ–ಮದ್ಯಸಾರಮುಕ್ತ ಮೌತ್‌ವಾಷ್ ಬಳಸುವುದರಿಂದ ಬಾಯಿಯನ್ನು ತಾಜಾ ಆಗಿರಿಸಲು ಸಾಧ್ಯವಾಗುತ್ತದೆ. ನೀವು ಬಳಸುವ ಮೌತ್‌ವಾಷ್‌ನಲ್ಲಿ ಎಥೆನಾಲ್ ಇದ್ದರೆ ಅದರಿಂದ ದೂರವಿರಿ. ಮದ್ಯಸಾರವು ಬಾಯಿಯ ಒಳಭಾಗವನ್ನು ಒಣಗಿಸುತ್ತದೆ.

► ಮೊಳಕೆ ಕಾಳುಗಳು ಮತ್ತು ಹಸಿರು ಎಲೆಗಳ ತರಕಾರಿಗಳು—ಮೊಳಕೆ ಕಾಳುಗಳು ಮತ್ತು ಹಸಿರು ಎಲೆಗಳುಳ್ಳ ತರಕಾರಿಗಳು ಸಮೃದ್ಧ ನಾರನ್ನು ಹೊಂದಿರುತ್ತವೆ ಮತ್ತು ನೈಸರ್ಗಿಕ ಟೂಥ್‌ಬ್ರಷ್‌ನಂತೆ ಕಾರ್ಯ ನಿರ್ವಹಿಸುತ್ತವೆ.

► ಪ್ರತಿ ಬಾರಿ ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸಿ

ಪ್ರತಿ ಬಾರಿ ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳ ಸಂದಿಯಲ್ಲಿ ಮತ್ತು ವಸಡುಗಳಲ್ಲಿ ಆಹಾರದ ಅವಶೇಷಗಳು ಉಳಿಯುವುದಿಲ್ಲ. ಇದರಿಂದ ಬಾಯಿಯ ದುರ್ವಾಸನೆಯನ್ನು ತಡೆಯುವ ಜೊತೆಗೆ ಬ್ಯಾಕ್ಟೀರಿಯಾಗಳ ದಾಳಿಯಿಂದ ಬಾಯಿಗೆ ರಕ್ಷಣೆಯೂ ದೊರೆಯುತ್ತದೆ.

► ಗಾಢವಾದ ವಾಸನೆಯುಳ್ಳ ಆಹಾರ ಸೇವನೆ ಬೇಡ

ಗಾಢವಾದ ವಾಸನೆಯುಳ್ಳ ಯಾವುದೇ ಆಹಾರ ನಿಮ್ಮ ಬಾಯಿ ವಾಸನೆ ಬೀರುವಂತೆ ಮಾಡುತ್ತದೆ. ಕೆಲವೊಮ್ಮೆ ಈ ವಾಸನೆ ಗಂಟೆಗಳ ಕಾಲ ಉಳಿದುಕೊಳ್ಳುತ್ತದೆ. ಹೀಗಾಗಿ ಬಾಯಿಯ ದುರ್ವಾಸನೆ ತಡೆಯಬೇಕೆಂದಿದ್ದರೆ ಇಂತಹ ಆಹಾರಗಳ ಸೇವನೆಯಿಂದ ದೂರವಿರಿ.

ವರ್ಷಕ್ಕೊಮ್ಮೆ ದಂತವೈದ್ಯರನ್ನು ಭೇಟಿಯಾಗಿ–ಕನಿಷ್ಠ ವರ್ಷಕ್ಕೊಮ್ಮೆಯಾದರೂ ದಂತವೈದ್ಯರ ಬಳಿ ನಿಮ್ಮ ಹಲ್ಲುಗಳ ತಪಾಸಣೆ ಮಾಡಿಸಿ. ಇದರಿಂದಾಗಿ ಏನಾದರೂ ಸಮಸ್ಯೆಗಳಿದ್ದರೆ ಆರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯವಾಗುತ್ತದೆ. ದಂತವೈದ್ಯರು ನಿಮ್ಮ ಬಾಯಿಯ ದುರ್ವಾಸನೆಗೆ ಕಾರಣವನ್ನು ಪತ್ತೆ ಹಚ್ಚಿ ಮೂಲದಲ್ಲಿಯೇ ಸಮಸ್ಯೆಗೆ ಪರಿಹಾರವನ್ನು ಸೂಚಿಸಬಲ್ಲರು.

Leave a Comment